ಹಿಮರಾಶಿಯಲ್ಲಿ ಚಿರತೆಗಳ ತುಂಟಾಟ- ವಿಡಿಯೋ
ಲಾಹೌಲ್ ಮತ್ತು ಸ್ಪಿಟಿ (ಹಿಮಾಚಲ ಪ್ರದೇಶ): ಭೂಮಿ ಮೇಲಿನ ಸ್ವರ್ಗದಂತಿರುವ ಹಿಮಾಚಲ ಪ್ರದೇಶ ಈಗ ಹಿಮರಾಶಿಯಿಂದ ಆವೃತಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ರಾಜ್ಯಕ್ಕೆ ಭೇಟಿ ನೀಡಿ ಮೋಜು-ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಮೂರು ಚಿರತೆಗಳೂ ಕೂಡಾ ಹಿಮದಲ್ಲಿ ಸ್ವಚ್ಛಂದವಾಗಿ ಆಟವಾಡುತ್ತಿರುವ ದೃಶ್ಯ ನೋಡುಗರ ಮನಸ್ಸು ಮುದಗೊಳಿಸುತ್ತಿದೆ.
ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಹಿಮರಾಶಿಯಲ್ಲಿ ಚಿರತೆಗಳು ಒಟ್ಟಿಗೆ ದರ್ಶನ ನೀಡಿವೆ. ಲಾಹೌಲ್ ಕಣಿವೆಯ ಬಿಲ್ಲಿಂಗ್ ಗ್ರಾಮದಲ್ಲಿ ಸ್ಥಳೀಯ ಯುವಕ ದೀಪೇಂದ್ರ ಎಂಬುವವರು ತಮ್ಮ ಕ್ಯಾಮರಾದಲ್ಲಿ ಆಕರ್ಷಕ ದೃಶ್ಯ ಸೆರೆ ಹಿಡಿದಿದ್ದಾರೆ. ಚಿರತೆಗಳು ಪರಸ್ಪರ ತುಂಟಾಟದಲ್ಲಿ ತೊಡಗಿರುವ ಕ್ಷಣಗಳನ್ನು ನೀವು ನೋಡಬಹುದು.
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಹಿಮ ಚಿರತೆಗಳು ಸ್ಪಿಟಿ ಕಣಿವೆಗೆ ಹೊಂದಿಕೊಂಡಿವೆ. ಹೀಗಾಗಿ ಇವುಗಳ ಚಲನವಲನಗಳು ಇಲ್ಲಿ ಹೆಚ್ಚು ಗೋಚರಿಸುತ್ತಿವೆ. ಅಲ್ಲದೇ, ಐಬೆಕ್ಸ್ ಮತ್ತು ನೀಲಿ ಕುರಿಗಳಂತಹ ಕಾಡು ಪ್ರಾಣಿಗಳ ಬೇಟೆಗೆ ನಿರ್ಬಂಧ ಹೇರಲಾಗಿದೆ. ಇದರಿಂದ ಹಿಮ ಚಿರತೆಗಳಿಗೆ ಅನುಕೂಲವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಸ್ಥಳೀಯರ ಸಹಕಾರದಿಂದ ಹಿಮ ಚಿರತೆಗಳ ರಕ್ಷಣೆ ಮತ್ತು ಕುರಿತ ಸಂಶೋಧನೆಯನ್ನು ಇಲಾಖೆ ನಡೆಸುತ್ತಿದೆ.
ಇದನ್ನೂ ಓದಿ:ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಹಿಮ ಕುಸಿದು ಇಬ್ಬರು ವಿದೇಶಿಗರು ಸಾವು, 21 ಜನರ ರಕ್ಷಣೆ