ವಿಧಾನಸೌಧದಲ್ಲಿ ಹಾವು ಪ್ರತ್ಯಕ್ಷ: ವಿಡಿಯೋ - ಈಟಿವಿ ಭಾರತ್ ಕನ್ನಡ ಸುದ್ದಿ
ಬೆಂಗಳೂರು:ನಾಡಿನಾದ್ಯಂತ ನಾಗರ ಪಂಚಮಿ ಹಬ್ಬ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ನಡುವೆ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲಿ ಹಾವು ಕಾಣಿಸಿಕೊಂಡಿದೆ. ಹಬ್ಬದ ಹಿಂದಿನ ದಿನವೇ ವಿಧಾನಸೌಧದಲ್ಲಿ ದರ್ಶನ ನೀಡಿದ್ದಕ್ಕೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ.
ಇಂದು ವಿಧಾನಸೌಧದಲ್ಲಿ ಹಾವು ಪ್ರತ್ಯಕ್ಷವಾಯಿತು. ವಿಧಾನಸೌಧದ ಪಶ್ಚಿಮದ್ವಾರದ ಮೆಟ್ಟಿಲು ಮೇಲೆ ಕಾಣಿಸಿಕೊಂಡ ಹಾವು ನಂತರ ಮೆಟ್ಟಿಲು ಮೂಲಕ ಸಾಗಿ ಕಟ್ಟಡದ ಪಕ್ಕದ ಬಿಲದಲ್ಲಿ ಸೇರಿಕೊಂಡಿತು. ಹಾವು ಕಾಣಿಸಿಕೊಳ್ಳುವ ಸ್ವಲ್ಪ ಸಮಯದ ಮೊದಲು ಇದೇ ಜಾಗದಲ್ಲಿ ದೇವರಾಜ ಅರಸು ಜಯಂತಿ ಕಾರ್ಯಕ್ರಮ ಮುಗಿಸಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಾಗಿದ್ದರು. ಜನಜಂಗುಳಿ ಇತ್ತು. ಅದಾದ ಕೆಲ ಕಾಲದಲ್ಲೇ ಪ್ರತ್ಯಕ್ಷವಾದ ಹಾವು, ನಂತರ ಕಟ್ಟಡದ ಪಕ್ಕ ನೀರು ಹರಿದುಹೋಗಲು ಮಾಡಿದ್ದ ಜಾಗದಿಂದ ಭೂಮಿಯೊಳಗೆ ಸೇರಿಕೊಂಡಿತು.
ವಿಧಾನಸೌಧದಲ್ಲಿ ಆಗಾಗ ಹಾವುಗಳು ಕಾಣಿಸಿಕೊಳ್ಳುತ್ತಿರುತ್ತವೆ. ಕೆಲವೊಮ್ಮೆ ಹಾವು ಹಿಡಿಯುವವರನ್ನು ಕರೆಸಿ ಹಿಡಿಸಲಾಗುತ್ತದೆ. ಕೆಲವೊಮ್ಮೆ ಹಾವುಗಳು ಸಿಗದೆ ನಾಪತ್ತೆಯಾಗುವುದೂ ಉಂಟು. ವಿಧಾನಸೌಧದ ಹೊರ ಆವರಣದಲ್ಲಿ ಹಾವು ಕಾಣಿಸಿಕೊಳ್ಳುವುದು ಹೊಸತಲ್ಲ ಮತ್ತು ವಿಶೇಷವೂ ಅಲ್ಲ. ಆದರೆ ನಾಗರ ಪಂಚಮಿ ಹಿಂದಿನ ದಿನವಾದ ಇಂದು ಕಾಣಿಸಿಕೊಂಡಿದ್ದು ವಿಶೇಷ.
ಇದನ್ನೂ ಓದಿ:ನೋಡಿ ನಂಗೆ ಒಂದೇ ಕಣ್ಣು.: ಕಾರವಾರದಲ್ಲಿ ಒಂದು ಕಣ್ಣಿನ ಅಪರೂಪದ ನಾಗರ ಹಾವು ಪತ್ತೆ