ನಶೆಯಲ್ಲಿ ಹಾವು ಹಿಡಿಯಲು ಹೋದ ವ್ಯಕ್ತಿ.. ನಾಲ್ಕಕ್ಕೂ ಹೆಚ್ಚು ಬಾರಿ ಕಚ್ಚಿದ ನಾಗ, ಸತ್ತೇ ಹೋದ ಎಂದು ತಿಳಿದಾಗ ಎದ್ದು ಕುಳಿತ! ವಿಡಿಯೋ - ಹಾವನ್ನು ಹಿಡಿಯಲು ಯತ್ನ
ಗದಗ: ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋದ ವ್ಯಕ್ತಿಯೊಬ್ಬ ಅದೇ ಹಾವಿನಿಂದ ಕಡಿತಕ್ಕೊಳಗಾದ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸಿದ್ದಪ್ಪ ಬಳಗಾನೂರು ಹಾವು ಕಡಿತಕ್ಕೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಮನೆಯೊಂದರಲ್ಲಿ ಹಾವು ಬಂದಿತ್ತು. ಈ ವಿಷಯ ಸಿದ್ದಪ್ಪನಿಗೆ ತಿಳಿದಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದನು. ಬಳಿಕ ಅದನ್ನು ಯಾವುದೇ ಸುರಕ್ಷಿತ ಪರಿಕರಗಳು ಇಲ್ಲದೆ ಬರಿಗೈಯಲ್ಲಿ ಹಿಡಿದಿದ್ದ. ಆಗ ಆತನಿಗೆ ಹಾವು ಕಚ್ಚಿರಲಿಲ್ಲ. ನನ್ನ ಕೈಯಲ್ಲಿ ಗರುಡ ರೇಖೆವಿದೆ ಎಂದು ಹೇಳಿ ಹಿಡಿದ ಹಾವನ್ನು ಬಿಟ್ಟಿದ್ದಾನೆ. ಬಳಿಕ ಮತ್ತೆ ಆ ಹಾವನ್ನು ಹಿಡಿಯಲು ಯತ್ನಿಸಿದ್ದಾನೆ. ಆಗ ಆ ಹಾವು ನಾಲ್ಕಕ್ಕೂ ಹೆಚ್ಚು ಬಾರಿ ಕಚ್ಚಿದೆ. ಆದ್ರೂ ಸಹಿತ ಆತ ಧೈರ್ಯವಾಗಿಯೇ ರಸ್ತೆಯಲ್ಲಿ ಓಡಾಡುತ್ತಿದ್ದ. ಬಳಿಕ ಕುಸಿದು ಬಿದ್ದಿದ್ದ.
ಕುಸಿದು ಬಿದ್ದ ಬಳಿಕ ಸಿದ್ದಪ್ಪನಿಗೆ ಹಾವಿನ ವಿಷ ಏರಿ ಸಾವನ್ನಪ್ಪಿದ್ದಾನೆ ಎಂದು ಗ್ರಾಮದಲ್ಲಿ ಸುದ್ದಿಯಾಗಿತ್ತು. ಆತನ ಅಂತ್ಯಕ್ರಿಯೆ ಮಾಡಲು ಸಿದ್ಧತೆ ಕೂಡ ನಡೆಸಲಾಗಿತ್ತು. ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುವಾಗ ಸಿದ್ದಪ್ಪ ದಿಢೀರ್ ಅಂತ ಎದ್ದು ಕುಳಿತಿದ್ದಾನೆ. ಸುದ್ದಿ ತಿಳಿದ ಗ್ರಾಮಸ್ಥರು ಅಚ್ಚರಿ ಕೂಡ ವ್ಯಕ್ತಪಡಿಸಿದರು. ಬಳಿಕ ಗ್ರಾಮಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಿದ್ದಪ್ಪ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.
ಓದಿ:Snake in Shoe: ಶೂ ಒಳಗೆ ಅವಿತು ಕುಳಿತಿದ್ದ ಮರಿ ನಾಗರ ಹಾವು ರಕ್ಷಣೆ.. ವಿಡಿಯೋ