ಏರ್ ಶೋ ನೋಡಲು ಬಂದು ಸ್ನೇಕ್ ಶೋ ನೋಡಿದ ಜನ - ವಿಡಿಯೋ - ಹಸಿರು ಬಣ್ಣದ ಉದ್ದನೆಯ ಹಾವು
ಯಲಹಂಕ: ಏರ್ ಶೋ ನೋಡಲು ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೆರೆಕಟ್ಟೆಯ ಮೇಲೆ ನಿಂತಿದ್ದ ಜನರ ಬಳಿ ಹಾವೊಂದು ಬಂದ ಪರಿಣಾಮ ಬೆಚ್ಚಿಬಿದ್ದಿದ್ದರು. ಹಸಿರು ಬಣ್ಣದ ಉದ್ದನೆಯ ಹಾವೊಂದು ಒಮ್ಮೆಲೆ ಮರದಿಂದ ಇಳಿದು ಜನರ ಬಳಿ ಬಂದು ಹೋದ ಕಾರಣ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಕಡ್ಡಿಯಿಂದ ಕೆರೆಯ ಕಡೆಗೆ ಹಾವು ಓಡಿಸುವ ಮೂಲಕ ನೆರೆದಿದ್ದ ಜನತೆ ನಿಟ್ಟುಸಿರು ಬಿಟ್ಟರು.
ಏರೋ ಇಂಡಿಯಾ 2023 ರ 14 ನೇ ಆವೃತ್ತಿಯ ಏರ್ ಶೋ ಇಂದಿನಿಂದ ಯಲಹಂಕ ವಾಯುನೆಲೆಯಲ್ಲಿ ಆರಂಭವಾಗಿದೆ. ಏಷ್ಯಾದ ಅತಿದೊಡ್ಡ ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ರು. ಐದು ದಿನಗಳ ಕಾಲ ನಡೆಯುವ ಏರ್ ಶೋಗೆ 3 ದಿನ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಕೊನೆಯ ಎರಡು ದಿನಗಳಲ್ಲಿ ಮಾತ್ರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೂ, ವೈಮಾನಿಕ ಪ್ರದರ್ಶನ ವೀಕ್ಷಿಸಲು ವಾಯುನೆಲೆ ಪಕ್ಕದ ಜಾಗದಲ್ಲಿ ಸಾಗರೋಪಾದಿಯಲ್ಲಿ ಜನ ಸೇರಿದ್ದಾರೆ.