ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಹುತೇಕ ಖಚಿತ.. ಅಭಿಮಾನಿಗಳು, ಬೆಂಬಲಿಗರಿಂದ ಸಂಭ್ರಮಾಚರಣೆ - karnataka next cm
ಬೆಂಗಳೂರು:ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರು ಆಯ್ಕೆ ಆಗಲಿದ್ದಾರೆ ಎಂದು ಬಹುತೇಕ ಖಚಿತವಾದ ಬೆನ್ನಲ್ಲೇ ಅವರ ಬೆಂಬಲಿಗರು, ಅಭಿಮಾನಿಗಳು ಬೆಂಗಳೂರಿನಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಜಮಾಯಿಸಿದ ಕಾರ್ಯಕರ್ತರು ಬಡವರ ಬಂಧು ಸಿದ್ದರಾಮಯ್ಯ, ಅನ್ನರಾಮಯ್ಯಗೆ ಜೈ ಎಂದು ಸಿದ್ದರಾಮಯ್ಯ ಪರ ಘೋಷಣೆ ಕೂಗುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ದೆಹಲಿಯಲ್ಲಿ 4 ದಿನಗಳಿಂದ ಹಲವು ಸುತ್ತಿನ ಸಭೆ, ಚರ್ಚೆಗಳ ಬಳಿಕ ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಆಗಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನಿವಾಸದಲ್ಲಿ ಮಂಗಳವಾರ ಇಡೀ ದಿನ ನಡೆದ ಸಿಎಂ ಆಯ್ಕೆ ವಿಚಾರದ ಬಗ್ಗೆ ಚರ್ಚೆ ಮಾಡಿ, ಈ ಹೊಣೆಯನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಲಾಗಿತ್ತು.
ರಾಹುಲ್ ಗಾಂಧಿ ಅವರು ತಮ್ಮ ನಿವಾಸಕ್ಕೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಕರೆಯಿಸಿಕೊಂಡು ಮಾತುಕತೆ ನಡೆಸಿದರು. ಈ ಹಿನ್ನೆಲೆ ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ ಎಂದು ಬಹುತೇಕ ಖಚಿತವಾಗಿದ್ದು, ಅಧಿಕೃತವಾಗಿ ಘೋಷಿಸುವುದು ಬಾಕಿ ಇದೆ. ಈ ಸುದ್ದಿ ತಿಳಿದು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಿದ್ದರಾಮಯ್ಯ ಅವರ ಬೆಂಬಲಿಗರ ಖುಷಿ ಇಮ್ಮಡಿಯಾಗಿದೆ.
ಇದನ್ನೂ ಓದಿ:ಕರ್ನಾಟಕಕ್ಕೆ ಯಾರು ಸಿಎಂ? ದೆಹಲಿಯಲ್ಲಿ ರಾಹುಲ್ ಭೇಟಿ ಮಾಡಿದ ಸಿದ್ದರಾಮಯ್ಯ