ಬಾದಾಮಿಯಲ್ಲಿ ಸಿದ್ದರಾಮಯ್ಯ ಅದ್ಧೂರಿ ರೋಡ್ ಶೋ... ಬೃಹತ್ ಹಾರ ಹಾಕಿ ಸ್ವಾಗತಿಸಿದ ಬೆಂಬಲಿಗರು
ಬಾಗಲಕೋಟೆ:ಬಾದಾಮಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದ ಅನರ್ಹಗೊಳಿಸಿರುವ ಬಗ್ಗೆ ಕೇಳಿದ ಪಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಆಗಮಿಸಿದ್ದೇನೆ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದು ಹೇಳಿ ಮುಂದೆ ಹೋದರು. ಇದೇ ವೇಳೆ ವಿಧಾನಸಭೆ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೀರಿ ಎಂದು ಕೇಳಲು ಮುಂದಾದ ಮಾಧ್ಯಮದವರ ಮೇಲೆ ಗರಂ ಆದರು.
ನಂತರ ತೊಗುಣಸಿ ಗ್ರಾಮದಲ್ಲಿರುವ ಪಂಪ್ ಹೌಸ್ಗೆ ತೆರಳಿ, 228 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡುರುವ ಕೆರೂರು ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದರು. ಬಾದಾಮಿ ಪಟ್ಟಣಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ರಾಮದುರ್ಗ ವೃತ್ತದಿಂದ ಎಪಿಎಂಸಿ ಆವರಣದಲ್ಲಿರುವ ವೇದಿಕೆವರೆಗೆ ತೆರೆದ ವಾಹನ ಮೂಲಕ ಅದ್ಧೂರಿಯಾಗಿ ರೋಡ್ ಶೋ ಮಾಡಿದರು. ಕಬ್ಬಿನಿಂದ ತಯಾರಿಸಿದ ಬೃಹತ್ ಹಾರ ಹಾಕಿ, ಜೆಸಿಬಿ ವಾಹನದ ಮೂಲಕ ಪುಷ್ಪ ಮಳೆ ಸುರಿಸಿ ಸ್ವಾಗತಿಸಲಾಯಿತು. ವಿವಿಧ ಕಲಾತಂಡಗಳು ಸಹ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಆಕರ್ಷಣೀಯವಾಗಿತ್ತು. ಬಾದಾಮಿ ಶಾಸಕರಾದ ಬಳಿಕ ಸಿದ್ದರಾಮಯ್ಯ ಅವರನ್ನು ಇಷ್ಟೊಂದು ಅದ್ಧೂರಿಯಾಗಿ ಸ್ವಾಗತಿಸಿರುವುದು ಇದೇ ಮೊದಲು.
ಇದನ್ನೂ ನೋಡಿ:ಟಿಕೆಟ್ ಬೇಡಿಕೆ ವೇಳೆ ತಳ್ಳಾಟ... ಕಾರ್ಯಕರ್ತನಿಗೆ ಸಿದ್ದರಾಮಯ್ಯರಿಂದ ಕಪಾಳಮೋಕ್ಷ