ಸಿದ್ದರಾಮಯ್ಯ ಸಿಎಂ: ಸಾವಿರ ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿ - ಕೆಪಿಸಿಸಿ ಸದಸ್ಯ ಕೆ ಮರೀಗೌಡ
ಮೈಸೂರು: ಸಿದ್ದರಾಮಯ್ಯ ಅವರ ಅಭಿಮಾನಿಯೊಬ್ಬ 2023 ಕ್ಕೆ ಸಿದ್ದರಾಮಯ್ಯ ಸಿಎಂ ಆದರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸಾವಿರ ತೆಂಗಿನಕಾಯಿ ಒಡೆಯುವುದಾಗಿ ಹರಕೆ ಹೊತ್ತಿದ್ದರು. ಇಂದು ಆ ಹರಕೆಯನ್ನು ತೀರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸಿಎಂ ಆದ ನಂತರ ಅವರ ಅಭಿಮಾನಿಗಳು ಎಲ್ಲೆಡೆ ಸಂಭ್ರಮಾಚರಣೆ ನಡೆಸಿದ್ದರು. ಹಲವಾರು ಅಭಿಮಾನಿಗಳು ಸಿದ್ದರಾಮಯ್ಯ ಸಿಎಂ ಆಗಲೆಂದು ದೇವರಿಗೆ ವಿವಿಧ ರೀತಿಯಲ್ಲಿ ಹರಕೆಯನ್ನು ಹೊತ್ತು ತೀರಿಸಿದ್ದರು. ಅದರಂತೆ ಮೈಸೂರಿನ ಸಿದ್ದರಾಮಯ್ಯ ಅಭಿಮಾನಿ ಹಾಗೂ ಕಾಂಗ್ರೆಸ್ ನ ಕಾರ್ಯಕರ್ತರಾದ ಮಹೇಶ್ ಎಂಬುವವರು ಇಂದು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ತಾವು ಹೊತ್ತಿದ್ದ ಹರಕೆ ತೀರಿಸಿದ್ದಾರೆ.
ಕಳೆದ ವರ್ಷ ಸಿದ್ದರಾಮಯ್ಯನವರು ತಮ್ಮ ಅಭಿಮಾನಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಮಹೇಶ್ ಎಂಬುವವರ ನೂತನ ಮಳಿಗೆ ಉದ್ಘಾಟನೆ ಮಾಡಿದ್ದರು. ಆ ವೇಳೆಯಲ್ಲಿಯೇ ಸಿದ್ದರಾಮಯ್ಯ ಮುಂದಿನ ಬಾರಿ (2023) ಮುಖ್ಯಮಂತ್ರಿ ಆದರೆ, ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸಾವಿರದ ಒಂದು ತೆಂಗಿನಕಾಯಿ ಒಡೆಯುವುದಾಗಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಈ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದು, ಇಂದು ಆ ಹರಕೆಯನ್ನು ತೀರಿಸಿದ್ದಾರೆ. ಈ ವೇಳೆಯಲ್ಲಿ ಕಾಂಗ್ರೆಸ್ ಮುಖಂಡ ಕೆ ಮರೀಗೌಡ ಸಹ ಇದ್ದರು.
ಇದೇ ವೇಳೆಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಕೆ ಮರೀಗೌಡ, ಸಿದ್ದರಾಮಯ್ಯ ಅವರು ಈ ರಾಜ್ಯದ ಸರ್ವಜನಾಂಗಗಗಳನ್ನು ಅಭಿವೃದ್ಧಿ ಮಾಡುವ ಏಕೈಕ ಮುಖ್ಯಮಂತ್ರಿ ಆಗಿದ್ದಾರೆ. ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಇಂದು ನಮ್ಮ ಪಕ್ಷದ ಕಾರ್ಯಕರ್ತರು ಇಂದು ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ, ಹೊತ್ತಿದ್ದ ಹರಕೆಯನ್ನು ತೀರಿಸಿದ್ದಾರೆ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಮತ್ತೆ ಸಿಎಂ ಆದರೆ..ಸೈಕಲ್ ಮೇಲೆ ಬೆಂಗಳೂರು ತಲುಪುವ ಹರಕೆ ಹೊತ್ತಿದ್ದ ಬೀಳಗಿ ಯುವಕರು...!