ಮಾವನ ಪರ ಮತಬೇಟೆಗೆ ಇಳಿದ ಸ್ಮಿತಾ ರಾಕೇಶ್: ವರುಣದಲ್ಲಿ ರಂಗೇರಿದ ಚುನಾವಣಾ ಕಣ - ಮತಬೇಟೆಗೆ ಇಳಿದ ಸ್ಮಿತಾ ರಾಕೇಶ್
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಅದೃಷ್ಟದ ಕ್ಷೇತ್ರವಾದ ವರುಣ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಅಷ್ಟೇ ಅಲ್ಲ ಇದು ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದೆ. ಮಾಜಿ ಸಿಎಂ ಕುಟುಂಬ ಬಲವಾಗಿ ಬೇರೂರಿದ್ದು, ಒಂದು ಕಾಲದ ಗೆಳೆಯರ ನಡುವೆ ಜಿದ್ದಾಜಿದ್ದಿ ಹೋರಾಟ ಬಲು ಜೋರಾಗಿದೆ.
ವರುಣ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸೋಮಣ್ಣನ ಪರ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್ ಮಾವನ ಪರ ಪ್ರಚಾರ ಕೈಗೊಂಡಿದ್ದು, ವರುಣ ವ್ಯಾಪ್ತಿಯ ಗ್ರಾಮಗಳಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ಈ ಮೊದಲು ಇವರ ಹಿರಿಯ ಮಗ ರಾಕೇಶ್ ಸಿದ್ದರಾಮಯ್ಯ, ವರುಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳನ್ನ ತಂದೆಯ ಪರ ನೋಡಿಕೊಳ್ಳುತ್ತಿದ್ದರು.
ಈವರೆಗೆ ಸಿದ್ದು ಕುಟುಂಬದಲ್ಲಿ ಗಂಡು ಮಕ್ಕಳನ್ನು ಬಿಟ್ಟರೆ ಅವರ ಪತ್ನಿ ಹಾಗೂ ಸೊಸೆ ಎಂದೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಮೊದಲ ಬಾರಿಗೆ ಮಾವನ ಪರವಾಗಿ ರಾಕೇಶ್ ಸಿದ್ದರಾಮಯ್ಯ ಪತ್ನಿ ಸ್ಮಿತಾ ರಾಕೇಶ್ ವರುಣ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳ ಮನೆ ಮನೆಗೆ ತೆರಳಿ, ಕಾಂಗ್ರೆಸ್ಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ.
ಈ ಬಾರಿ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಪ್ರತಿ ಗ್ರಾಮಗಳಿಗೂ ಮೆರವಣಿಗೆ ಮೂಲಕ ಹೋಗಿ ಮತಯಾಚಿಸುತ್ತಿದ್ದಾರೆ. ನಾನು ಗೆದ್ದರೆ ವರುಣ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಎಳೆದುಕೊಂಡು ಹೋಗುತ್ತೇನೆ ಎಂದು ಭರವಸೆ ನೀಡುತ್ತಿದ್ದಾರೆ. ವರುಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಜಯಗಳಿಸಲು ಬೇಕಾದ ಎಲ್ಲ ತಂತ್ರಗಳನ್ನ ಮಾಡುತ್ತಿದೆ.