ಅದ್ಧೂರಿಯಾಗಿ ನೆರವೇರಿದ ಹಂಪಿ ಶ್ರೀ ವಿರೂಪಾಕ್ಷೇಶ್ವರ ಬ್ರಹ್ಮರಥೋತ್ಸವ
ವಿಜಯನಗರ: ದಕ್ಷಿಣದ ಕಾಶಿ ಎಂದೇ ಪ್ರಖ್ಯಾತಗೊಂಡಿರುವ ಹಂಪಿಯಲ್ಲಿ ಶ್ರೀ ವಿರೂಪಾಕ್ಷೇಶ್ವರ ದೇವರ ಬ್ರಹ್ಮರಥೋತ್ಸವವು ಗುರುವಾರ(ನಿನ್ನೆ) ಭಕ್ತಿಭಾವ ಹಾಗೂ ಸಂಭ್ರಮದಿಂದ ಜರುಗಿತು. ರಥೋತ್ಸವಕ್ಕೆ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಜನರು ಸಾಕ್ಷಿಯಾದರು. ವಿಜಯನಗರ ಅರಸರ ಕಾಲದ ರತ್ನಖಚಿತ ಸ್ವರ್ಣಮುಖ ಕಿರೀಟದಿಂದ ವಿರೂಪಾಕ್ಷೇಶ್ವರ ಸ್ವಾಮಿಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀ ಪಂಪಾ ವಿರೂಪಾಕ್ಷ ದೇಗುಲದ ಮುಂಭಾಗದ ತೇರು ಬೀದಿಯಲ್ಲಿ ರಥೋತ್ಸವ ನಡೆಯಿತು. ಹಂಪಿಯ ಕಲ್ಲು ಬಂಡೆಗಳು ಮತ್ತು ತೇರು ಬೀದಿಯಲ್ಲಿ ಸೇರಿದ ಜನರು ರಥೋತ್ಸವ ಕಣ್ತುಂಬಿಕೊಂಡರು. ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ, ತಮಿಳುನಾಡು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ವೈಭವದಲ್ಲಿ ಭಾಗಿಯಾದರು.
ಜಾತ್ರಾ ಮಹೋತ್ಸವ ನಿಮಿತ್ತ ಶ್ರೀರಾಮ ನವಮಿಯಿಂದ 9 ದಿನಗಳ ಕಾಲ ನಡೆಯುವ ಸಿಂಹವಾಹನೋತ್ಸವ, ಚಂದ್ರಮಂಡಲ ವಾಹನೋತ್ಸವ, ಸೂರ್ಯಪ್ರಭ ವಾಹನೋತ್ಸವ, ಶೇಷ ವಾಹನೋತ್ಸವ, ಪುಷ್ಪಮಂಟಪ ವಾಹನೋತ್ಸವ, ಗಜವಾಹನೋತ್ಸವ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದರು. ಭಕ್ತರು ಬೆಳಗ್ಗೆ ತುಂಗಭದ್ರಾ ನದಿಯಲ್ಲಿ ಪುಣ್ಯಸ್ಥಾನ ಮಾಡಿ ದೇವರ ದರ್ಶನ ಪಡೆದರು.
ಇದನ್ನೂ ಓದಿ:ವಿಜಯಪುರ: ಗೋಲ್ಲಾಳೇಶ್ವರ, ಬಸವೇಶ್ವರ ರಥೋತ್ಸವದಲ್ಲಿ ಇಬ್ಬರು ಭಕ್ತರ ಸಾವು