ಶಿವಮೊಗ್ಗ: ಚಂದ್ರಗುತ್ತಿ ದೇವಾಲಯದ ಹುಂಡಿ ಎಣಿಕೆ, ₹29 ಲಕ್ಷ ಸಂಗ್ರಹ - ಮುಜರಾಯಿ ಇಲಾಖೆ
ಶಿವಮೊಗ್ಗ :ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿರುವ ಐತಿಹಾಸಿಕ, ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದ ಹುಂಡಿ ಹಣ ಏಣಿಕೆ ಕಾರ್ಯ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿ ಇಂದು ನಡೆಯಿತು. ಚಂದ್ರಗುತ್ತಿ ನಾಡಕಚೇರಿ ಉಪ ತಹಶೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಅವರ ಸಮ್ಮುಖದಲ್ಲಿ ಭಕ್ತರಿಂದ ಹರಿದು ಬಂದ ಕಾಣಿಕೆ ಹುಂಡಿಯ ಹಣ ಏಣಿಕೆ ಕಾರ್ಯ ನಡೆಯಿತು.
ಹುಂಡಿಯಲ್ಲಿ 29,36,530 ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಹುಂಡಿ ಹಣ ಎಣಿಸಿದಾಗ 41,23,920 ರೂ. ಸಂಗ್ರಹವಾಗಿತ್ತು. ಕೇವಲ ಐದು ತಿಂಗಳಿನಲ್ಲಿ ದೇವಸ್ಥಾನದ ಗರಿಷ್ಠ ಮೊತ್ತ ಕಾಣಿಕೆ ಹಣ 70,60,450 ರೂ. ಸಂಗ್ರಹವಾಗಿದೆ. ಏಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.
ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ವಿಷಯ ನಿರ್ವಾಹಕರು, ತಾಲೂಕು ಕಂದಾಯ ಇಲಾಖೆ, ಗ್ರಾಮ ಲೆಕ್ಕಿಗರು ಮತ್ತು ಚಂದ್ರಗುತ್ತಿ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ಹಾಗೂ ದೇವಸ್ಥಾನದ ಸಿಬ್ಬಂದಿ ಸೇರಿದಂತೆ ಚಂದ್ರಗುತ್ತಿ ಆರಕ್ಷಕ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ದೇವಸ್ಥಾನದಿಂದ ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯ ಸಂಗ್ರಹವಾಗುತ್ತಿದೆ. ಆದರೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಮುಂದಾಗುತ್ತಿಲ್ಲ ಎಂಬುದು ಶ್ರೀ ರೇಣುಕಾಂಬ ದೇವಿ ಭಕ್ತರ ಬೇಸರ.
ಇದನ್ನೂ ಓದಿ :ಮಲೆಮಹದೇಶ್ವರ ದೇಗುಲದ ಹುಂಡಿ ಎಣಿಕೆ: 32 ದಿನ, ಎರಡೂವರೆ ಕೋಟಿ ಹಣ- ವಿಡಿಯೋ