ಹೂವಿನ ಮಂಟಪದಲ್ಲಿ ವೀರಾಜಮಾನಳಾದ ಶಾಂತಿಕಾ ಪರಮೇಶ್ವರಿ: ಅದ್ಬುತ ದೃಶ್ಯದ ವಿಡಿಯೋ
Published : Oct 8, 2023, 4:18 PM IST
ಕಾರವಾರ : ಜಿಲ್ಲೆಯ ಕುಮಟಾ ಪಟ್ಟಣದ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಬರೀ ಹೂವಿನಿಂದಲೇ ಮಂಟಪವನ್ನು ತಯಾರಿಸಲಾಗಿದೆ. ಪ್ರತಿವರ್ಷ ಭಾದ್ರಪದ ಮಾಸದಂದು ಈ ರೀತಿ ಅಲಂಕಾರ ಮಾಡಲಾಗುತ್ತದೆ. ಈ ವೇಳೆ ಜಾಜಿ ಅಥವಾ ಸೇವಂತಿಕಾ ಪುಷ್ಟಗಳು ಧಾರಾಳವಾಗಿ ಸಿಗುವುದರಿಂದ ಭಾದ್ರಪದ ಅಶ್ವಿಜ ಮತ್ತು ಕಾರ್ತಿಕ ಮಾಸಗಳಲ್ಲಿ ಪುಷ್ಪ ಪೂಜೆಯನ್ನು ಇಲ್ಲಿ ಮಾಡಲಾಗುತ್ತದೆ.
ಹತ್ತಾರು ಬಗೆಯ ಹೂವುಗಳನ್ನು ಸೇರಿಸಿ ಸುಂದರ ಮಂಟಪವನ್ನು ರಚಿಸಲಾಗುತ್ತದೆ. ಬಣ್ಣ ಬಣ್ಣದ ಹೂವುಗಳನ್ನು ಸೇರಿಸಿ ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಇದರ ಮಧ್ಯದ ಗರ್ಭಗುಡಿಯಲ್ಲಿ ವೀರಾಜಮಾನಳಾಗುವ ದೇವಿ ಪ್ರತಿ ವರ್ಷ ಅಸಂಖ್ಯಾತ ಭಕ್ತರನ್ನು ಆಕರ್ಷಿಸುತ್ತಿದೆ. ಅಲ್ಲದೆ ಪ್ರತಿ ವರ್ಷವೂ ಈ ಅಪರೂಪದ ದೇವಿಯ ಸನ್ನಿದಾನವನ್ನು ನೋಡಲು ಭಕ್ತರು ಆಗಮಿಸುತ್ತಾರೆ ಎನ್ನುತ್ತಾರೆ ದೇವಸ್ಥಾನ ಆಡಳಿತ ಮಂಡಳಿಯವರಾದ ಕೃಷ್ಣ ಪೈ.
ಇನ್ನು ಪ್ರತಿವರ್ಷ ಭಾದ್ರಪದ ಮಾಸದಂದು ಈ ಮಂಟಪ ತಯಾರಿಸಲಾಗುತ್ತದೆ. ಈ ಮಂಟಪಕ್ಕೆ ಸುಮಾರು ಲಕ್ಷಾಂತರ ರೂಪಾಯಿ ಮೌಲ್ಯದ ಹೂವು ಬಳಸುತ್ತಾರೆ. ಈ ಮಂಟಪ ತಯಾರಿಸಲು ಸುಮಾರು ಎರಡು ದಿನ ಬೇಕಾಗುತ್ತದೆ. ಇದನ್ನು ಶಾಂತಿಕಾ ಪರಮೇಶ್ವರಿ ದೇವಿಯ ಭಕ್ತರು ಸುಮಾರು 89 ವರ್ಷದಿಂದ ತಯಾರಿಸುತ್ತಾ ಬಂದಿದ್ದಾರೆ. ನೂರಾರು ವರ್ಷಗಳ ಇತಿಹಾಸ ಇರುವ ಶಾಂತಿಕಾ ಪರಮೇಶ್ವರಿಯ ದೇವಿಯ ಸನ್ನಿಧಿಯಲ್ಲಿ ಈ ದಿನದಂದು ಸಾವಿರಾರು ಜನ ಪಾಲ್ಗೊಂಡು ಹೂವಿನ ಮಂಟಪ ವೀಕ್ಷಿಸುತ್ತಾರೆ.
ಕುಮಟಾ, ಅಂಕೋಲಾ, ಹೊನ್ನಾವರ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರಗಳಿಂದಲೂ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದಲ್ಲಿ ಕನಕಾಂಬರ, ಸೇವಂತಿಗೆ, ಮಲ್ಲಿಗೆ, ಗೊಂಡೆ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗುತ್ತೆ. ಪುಷ್ಪ ಪೂಜೆಯ ದಿನ ದೇವಿಯನ್ನ ನೋಡೋದೆ ಖುಷಿ. ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಹೂವಿನ ಅಲಂಕಾರ ಪೂಜೆ ವಿಶೇಷವಾಗಿದ್ದು, ಬೇರೆ ದೇವಸ್ಥಾನಗಳಲ್ಲಿ ಇಂತಹ ಅಲಂಕಾರ ನೋಡಲು ಸಿಗುವುದಿಲ್ಲ ಅನ್ನೋದು ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅಭಿಪ್ರಾಯ.
ಇದನ್ನೂ ಓದಿ:₹2.5 ಕೋಟಿ ಮೌಲ್ಯದ ನೋಟು, ₹56 ಲಕ್ಷ ಮೌಲ್ಯದ ನಾಣ್ಯಗಳಿಂದ ಗಣಪತಿ ದೇಗುಲ ಅಲಂಕಾರ!- ನೋಡಿ