ಮಂಡ್ಯ: ಇಬ್ಬರು ಮಹಿಳಾ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ ಶಾಸ್ತ್ರ - ಠಾಣೆಯಲ್ಲಿ ಇಬ್ಬರು ಮಹಿಳಾ ಸಿಬ್ಬಂದಿಗೆ ಸೀಮಂತ ಶಾಸ್ತ್ರ
Published : Oct 30, 2023, 7:56 AM IST
ಮಂಡ್ಯ: ಇಲ್ಲಿನ ಕೆ ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳಾ ಸಿಬ್ಬಂದಿಗೆ ಸೀಮಂತ ಶಾಸ್ತ್ರವನ್ನು ಮಾಡಲಾಯಿತು. ಸರ್ಕಲ್ ಇನ್ಸ್ಪೆಕ್ಟರ್ ಸುಮಾರಾಣಿ ಅವರು ಇಬ್ಬರು ಮಹಿಳಾ ಪೇದೆಗಳಿಗೆ ಉಡಿ ತುಂಬಿ, ಮಡಿಲಕ್ಕಿ ಹಾಕಿ, ಕೊಬ್ಬರಿ ಬೆಲ್ಲ, ತೆಂಗಿನಕಾಯಿ ಅರಿಶಿಣ ಕುಂಕುಮ ಹಾಗೂ ಬಳೆಗಳನ್ನು ನೀಡಿ ಸೀಮಂತ ಮಾಡಿದರು.
ಕೆ.ಆರ್. ಪೇಟೆ ಪಟ್ಟಣ ಪೊಲೀಸ್ ಠಾಣೆಯ ಮಹಿಳಾ ಪೇದೆಗಳಾದ ಶಾರದಾ ಮತ್ತು ಅಸ್ಮಾಬಾನು ಅವರಿಗೆ ಸೀಮಂತ ಸಂಸ್ಕಾರ ನಡೆಸಲಾಯಿತು. ಈ ವೇಳೆ ಠಾಣೆಯ ಸಿಬ್ಬಂದಿ, ಮಹಿಳಾ ಪೇದೆಗಳ ಕುಟುಂಬಸ್ಥರು ಸಂಭ್ರಮದಲ್ಲಿ ಪಾಲ್ಗೊಂಡರು. ಸೀಮಂತ ಕಾರ್ಯಕ್ರಮದ ಬಳಿಕ ಶಾರದಾ ಹಾಗೂ ಅಸ್ಮಾಬಾನು ಅವರಿಗೆ ಶುಭ ಹಾರೈಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಆರಕ್ಷಕ ಉಪನಿರೀಕ್ಷಕ ಸುನಿಲ್, ಸಹಾಯಕ ಆರಕ್ಷಕ ಉಪ ನಿರೀಕ್ಷಕ ಚಂದ್ರಶೇಖರ್ ಸೇರಿದಂತೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು. ಸಾಮಾನ್ಯವಾಗಿ ಸೀಮಂತವನ್ನು ಮನೆಯವರ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಆದರೆ, ಮಹಿಳಾ ಸಿಬ್ಬಂದಿಗೆ ಸಹೋದ್ಯೋಗಿಗಳು ಸೀಮಂತ ಕಾರ್ಯಕ್ರಮ ನಡೆಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ :ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ: ಗೃಹ ಸಚಿವ ಜಿ ಪರಮೇಶ್ವರ್