ಸಂಸತ್ ಮೇಲೆ ದಾಳಿ; ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
Published : Dec 19, 2023, 3:42 PM IST
ಶಿವಮೊಗ್ಗ: ಸಂಸದ ಪ್ರತಾಪ್ ಸಿಂಹ ನೀಡಿದ ಪಾಸ್ನಿಂದ ಸಂಸತ್ ಮೇಲೆ ದಾಳಿ ನಡೆದಿದೆ. ಇದರಿಂದ ತಕ್ಷಣ ಸಂಸದರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು. ಜಿಲ್ಲಾ ಕಾಂಗ್ರೆಸ್ ಭವನದಿಂದ ಮಹಾವೀರ ವೃತ್ತದವರೆಗೂ ಪ್ರತಿಭಟನೆ ನಡೆಸಲಾಯಿತು. ನಂತರ ಮಹಾವೀರ ವೃತ್ತದಲ್ಲಿ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ಹೊರ ಹಾಕಿದರು.
ಸಂಸತ್ ಒಳಗೆ ನುಗ್ಗಿದ ನಾಲ್ವರು ತಮ್ಮ ಕೈಯಲ್ಲಿ ಹೊಗೆ ಗ್ಯಾಸ್ ಹಿಡಿದುಕೊಂಡಿದ್ದರು. ಸಾಕಷ್ಟು ಭದ್ರತೆ ಇರುವ ಸಂಸತ್ ಒಳಗೆ ಹೋಗಲು ಪಾಸ್ ನೀಡಿದವರು ಸಂಸದ ಪ್ರತಾಪ್ ಸಿಂಹ. ಇದರಿಂದ ಅವರನ್ನು ತಕ್ಷಣ ಸಂಸತ್ ಸ್ಥಾನದಿಂದ ಅಮಾನತು ಮಾಡಬೇಕು ಜೊತೆಗೆ ಬಂಧಿಸಿ ವಿಚಾರಣೆ ಮಾಡಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ನ ಯಾರೋ ಇಬ್ಬರು ಪಾಸ್ ನೀಡಿದ್ದರೆ ಬಿಜೆಪಿ ದೇಶದಲ್ಲಿಯೇ ದೊಡ್ಡ ಪ್ರತಿಭಟನೆ ನಡೆಸುತ್ತಿತ್ತು. ಈಗ ಬಿಜೆಪಿಯವರು ಬಾಯಿ ಮುಚ್ಚಿಕೊಂಡಿದ್ದಾರೆ. ಸಂಸತ್ನಲ್ಲಿ ಉತ್ತರ ಕೊಡಬೇಕಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕೂಡ ಯಾವುದೇ ಉತ್ತರ ನೀಡದೇ ಪಲಾಯನ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: 12,577.86 ಕೋಟಿ ತುರ್ತು ಬರ ಪರಿಹಾರಕ್ಕೆ ಮನವಿ