ಕೇದಾರನಾಥನ ದರ್ಶನಕ್ಕೆ ಬಂದು ಹಿಮದಲ್ಲಿ ಸಿಲುಕಿಕೊಂಡ ಭಕ್ತನ ರಕ್ಷಣೆ - ವಿಡಿಯೋ - ಕೇದಾರನಾಥ ಧಾಮಕ್ಕೆ ಭೇಟಿ
ಉತ್ತರಾಖಂಡ: ಕೇದಾರನಾಥ ಧಾಮಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲು ಬಂದಿದ್ದ ಉತ್ತರ ಪ್ರದೇಶದ ಭಕ್ತರೊಬ್ಬರು ಸುಮೇರು ಪರ್ವತದ ಹಿಮದಲ್ಲಿ ಸಿಲುಕಿಕೊಂಡಿದ್ದು, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಏಫ್ ತಂಡಗಳು ಕಾರ್ಯಚರಣೆ ನಡೆಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ವೃಂದಾವನ ನಿವಾಸಿ ಸಚಿನ್ ಗುಪ್ತಾ (38) ಅವರು ಮೊದಲು ಕೇದಾರನಾಥ ದೇವಸ್ಥಾನದಿಂದ ಭೈರವನಾಥ ದೇವಸ್ಥಾನಕ್ಕೆ ತೆರಳಿದರು. ಅಲ್ಲಿಂದ ರೋಮಾಂಚನಕಾರಿ ಅನುಭವ ಪಡೆಯಲು ಪರ್ವತವನ್ನೇರುತ್ತಾ ಹೋದರು. ಸುಮೇರು ಪರ್ವತವನ್ನು ತಲುಪಿದಾಗ ಅಲ್ಲಿ ಸಾಕಷ್ಟು ಹಿಮವಿದ್ದು, ಸಚಿನ್ ಗುಪ್ತಾ ಅಲ್ಲಿಯೇ ಸಿಲುಕಿಕೊಂಡರು. ಮುಂದೆ ಹೋಗಲು ಅವಕಾಶವೂ ಇರಲಿಲ್ಲ ಜೊತೆಗೆ ಹಿಂತಿರುಗಲು ಸಾಧ್ಯವಾಗದೇ ಸುಸ್ತಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಬಳಿಕ NDRF ಮತ್ತು SDRF ತಂಡ ಸುಮೇರು ಪರ್ವತದ ತುದಿಯಿಂದ ಸಾಕಷ್ಟು ಪ್ರಯತ್ನ ನಡೆಸಿ ಯುಪಿ ಭಕ್ತನನ್ನು ರಕ್ಷಿಸಿದರು.
ಸಚಿನ್ ಗುಪ್ತಾ ಅವರು ಕೇದಾರನಾಥ ದೇವಸ್ಥಾನದಿಂದ ನಾಲ್ಕು ಕಿಲೋಮೀಟರ್ ಎತ್ತರದ ಪ್ರದೇಶಕ್ಕೆ ತೆರಳಿದ್ದು, ಅಲ್ಲಿ 6 ಅಡಿಗೂ ಹೆಚ್ಚು ಹಿಮವಿತ್ತು. ಸದ್ಯಕ್ಕೆ ಅವರನ್ನು ಕೇದಾರನಾಥ ಧಾಮದಲ್ಲಿರುವ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ :ಹಿಮಾಚಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟ ಹಿಮ: ಜೆಸಿಬಿ ಬಳಸಿ ತೆರವು- ವಿಡಿಯೋ