ಶಾಲಾ ವಾಹನ ಪಲ್ಟಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಕ್ಕಳು ಪಾರು..!
ಬೆಳಗಾವಿ:ಚಾಲಕನ ನಿರ್ಲಕ್ಷ್ಯದಿಂದ ಶಾಲಾ ವಾಹನ ಪಲ್ಟಿ ಹೊಡೆದು, ಮಕ್ಕಳು ಅದೃಷ್ಡವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದ ಬಳಿ ನಡೆದಿದೆ. ಟಾಟಾ ಮ್ಯಾಜಿಕ್ ವಾಹನದಲ್ಲಿ 35 ಮಕ್ಕಳನ್ನು ತುಂಬಿಕೊಂಡು ಚಾಲಕ ಹೋಗುತ್ತಿದ್ದ. ಬೈಲಹೊಂಗಲ ಸಮೀಪದ ಮರಕುಂಬಿಯಲ್ಲಿರುವ ಗಣಾಚಾರಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ವಾಹನ ಇದಾಗಿದೆ. ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ತುಂಬಿಕೊಂಡು ಹೋಗಿರುವುದು ಕೂಡ ಶಾಲಾ ನಿರ್ಲಕ್ಷ್ಯ ಮತ್ತು ಚಾಲಕನ ಬೇಜಬ್ದಾರಿಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಹಳೆಯದಾಗಿದ್ದು ಇದನ್ನೇ ಬಳಸುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಲಾ ಆಡಳಿತ ಮಂಡಳಿ ಮತ್ತು ವಾಹನ ಚಾಲಕನ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. 'ಸ್ಕೂಲ್ ಗಾಡಿ ಮೂರು ಪಲ್ಟಿ ಹೊಡೆದು ಬಿದ್ದಿದೆ. ಘಟನೆಯಲ್ಲಿ ಮಕ್ಕಳು ಬದುಕಿದ್ದೇ ಹೆಚ್ಚು. ಹೊಸ ಗಾಡಿ ತಗೊಳ್ಳಿ ಅಂತಾ ಶಾಲೆಯವರಿಗೆ ಹೇಳಿದರೂ ಅವರು ಕೇಳಿಲ್ಲ' ಎಂದು ಕಿಡಿಕಾರಿದರು. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಡಿಪಾಸಿಟ್ ಬಟನ್ ಒತ್ತದ ಕಾರಣ ಮಿಷನ್ನಲ್ಲೇ ಉಳಿದಿದ್ದ 52 ಸಾವಿರ ರೂ. ದೋಚಿದ ವ್ಯಕ್ತಿ : ಸಿಸಿಟಿವಿ ವಿಡಿಯೋ