ಗಾಂಜಾ ಅಮಲಿನಲ್ಲಿ ನಡುರಸ್ತೆಯಲ್ಲಿ ಪುಡಿರೌಡಿಗಳ ಅಟ್ಟಹಾಸ: ಸಿಸಿಟಿವಿ ದೃಶ್ಯ - ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಆನೇಕಲ್: ನಡುರಸ್ತೆಯಲ್ಲೇ ಮಾದಕ ದ್ರವ್ಯ ಗಾಂಜಾ ಮತ್ತಿನಲ್ಲಿ ಪುಡಿ ರೌಡಿಗಳು ಲಾಂಗ್, ಮಚ್ಚು ಹಿಡಿದು ಅಟ್ಟಹಾಸ ಮೆರೆದಿರುವ ಘಟನೆ ಆನೇಕಲ್ನಲ್ಲಿ ಗುರುವಾರ ನಡೆದಿದೆ. ಹಾಡಹಗಲೇ ಮಾರಕಾಸ್ತ್ರ ಝಳಪಿಸಿರುವ ರೌಡಿಗಳು ಪೊಲೀಸರ ಭಯವಿಲ್ಲದೇ ಪುಂಡಾಟಿಕೆ ತೋರಿಸಿದ್ದಾರೆ. ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ಓಡಾಟ ನಡೆಸಿ ರಸ್ತೆಯಲ್ಲಿ ಕೇಕೆ ಹಾಕಿದ್ದಾರೆ. ಘಟನೆ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.
ಕಾಲೇಜು ವಿದ್ಯಾರ್ಥಿಗಳ ಮುಂದೆ ಕಿಡಿಗೇಡಿಗಳು ಈ ರೀತಿ ದುರ್ವರ್ತನೆ ಪ್ರದರ್ಶಿಸುತ್ತಿದ್ದಾರೆ. ತಾವು ದೊಡ್ಡ ಡಾನ್‌ಗಳೆಂದು ಎಂದು ಬಿಂಬಿಸಿಕೊಳ್ಳಲು ಮಚ್ಚು ಲಾಂಗು ಹಿಡಿದು ಓಡಾಡುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಗ್ಯಾಂಗ್ಗಳನ್ನು ಕಟ್ಟಿಕೊಂಡು ರಾಬರಿ, ಕಳ್ಳತನ, ಹಫ್ತಾ ವಸೂಲಿಗೆ ದುಷ್ಕರ್ಮಿಗಳು ಹೊಂಚು ಹಾಕುತ್ತಿದ್ದಾರೆ. ಈ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇಂಥ ಸಮಾಜಘಾತುಕ ಶಕ್ತಿಗಳನ್ನು ಪೊಲೀಸರು ಮಟ್ಟ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇನ್ನು ರಾಜ್ಯದ ಹಲವೆಡೆ ಗಾಂಜಾ ಸೇರಿದಂತೆ ಮತ್ತಿತರ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪೊಲೀಸರು ಆಗಾಗ್ಗೆ ದಾಳಿ ನಡೆಸಿ ಕಠಿಣ ಕ್ರಮಗಳನ್ನು ಜರುಗಿಸುತ್ತಿದ್ದರೂ ಇಂಥ ಕೃತ್ಯಗಳಿಗೆ ಪೂರ್ಣವಾಗಿ ಕಡಿವಾಣ ಬಿದ್ದಿಲ್ಲ.
ಇದನ್ನೂ ಓದಿ :ದ್ವಿಚಕ್ರ ವಾಹನದ ಸೈಲೆನ್ಸರ್ ತೆಗೆಸಿ ಸವಾರರಿಗೆ ಪೊಲೀಸರಿಂದ ಕ್ಲಾಸ್