ಆಟದ ಗೊಂಬೆಯೇ ಟೀಚರ್! ಮಕ್ಕಳಿಗೆ ಪಾಠ ಹೇಳಿಕೊಡುತ್ತೆ ಈ 'ಶಿಕ್ಷಾ' ರೋಬೋ - ಪಾಠ ಮಾಡುವ ರೋಬೋ
ಶಿರಸಿ(ಉತ್ತರ ಕನ್ನಡ): ಶಿರಸಿಯ ಎಂಇಎಸ್ ಚೈತನ್ಯ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕ ಅಕ್ಷಯ್ ಮಾಶೆಲ್ಕರ್ ಪಾಠ ಮಾಡುವ ರೋಬೋ ತಯಾರಿಸಿದ್ದಾರೆ. ಇದಕ್ಕೆ 'ಶಿಕ್ಷಾ' ಎಂದು ಹೆಸರಿಡಲಾಗಿದೆ. ಇದು ಕಾಗುಣಿತ, ಮಗ್ಗಿ, ಪದ್ಯ ಎಲ್ಲವನ್ನೂ ಮಕ್ಕಳಿಗೆ ಹೇಳಿಕೊಡುವ ರೋಬೋಟ್. ಮಕ್ಕಳನ್ನು ಬೇಗನೇ ಆಕರ್ಷಿಸುವ ರೋಬೋ ಪಾಠದ ಜತೆಗೆ ಮಕ್ಕಳ ಜತೆ ಆಟವನ್ನು ಸಹ ಆಡಿಸುತ್ತದೆ. ಹೀಗಾಗಿ ಮಕ್ಕಳಿಗೆ ಈ ಗೊಂಬೆ ಟೀಚರ್ ಅಂದರೆ ಅಚ್ಚುಮೆಚ್ಚು.
'ಶಿಕ್ಷಾ' ರೋಬೋ: ಮಕ್ಕಳ ಪಾಠದ ಎಲ್ಲ ಪ್ರಶ್ನೆಗೂ ಉತ್ತರ ನೀಡುವ ರೋಬೋ ಕ್ಲಾಸ್‌ನ ಟಾಪ್ ವಿದ್ಯಾರ್ಥಿಯೂ ಹೌದು. ಇದಕ್ಕೆ ಮೊದಲೇ ಅಗತ್ಯ ವಿಷಯಗಳನ್ನೆಲ್ಲ ಫೀಡ್ ಮಾಡಲಾಗಿದೆ. ಕೈಯಲ್ಲಿ ಸ್ಮಾರ್ಟ್ ಕಾರ್ಡ್ ಇಟ್ಟ ತಕ್ಷಣ ಏನೆಲ್ಲಾ ವಿಷಯಗಳಿದೆಯೋ ಆ ವಿಷಯಗಳ ಬಗ್ಗೆ ಈ ರೋಬೋಟ್ ಪ್ರತಿಯೊಬ್ಭರಿಗೂ ಅರ್ಥವಾಗುವ ಹಾಗೆ ವಿವರಣೆ ನೀಡುತ್ತದೆ. ಈಗಾಗಲೇ ಶಾಲೆ ಶಾಲೆಗೆ ಸವಾರಿ ಆರಂಭಿಸಿರುವ ಶಿಕ್ಷಾ ಟೀಚರ್ ಮಕ್ಕಳನ್ನು ಪಾಠದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರೋ.ಅಕ್ಷಯ್ ಮಾಶೆಲ್ಕರ್ ಹಾಗೂ ಅವರ ಶಿಷ್ಯ ಆದರ್ಶ್ ದೇವಾಡಿಗಸೇರಿ ನಿರ್ಮಿಸಿರುವ ಈ ರೋಬೋಟ್ ವಿದ್ಯುತ್ ಚಾಲಿತವಾಗಿದೆ. ಹಲವು ಸೆನ್ಸಾರ್ಗಳನ್ನು ಈ ಸಾಧನಕ್ಕೆ ಅಳವಡಿಸಲಾಗಿದೆ. ವಿಶೇಷವಾಗಿ ಸ್ಮಾರ್ಟ್ ಕಾರ್ಡ್ ಹಾಗೂ ಗೊಂಬೆಯ ಕೈ ಇವೆರಡರಿಂದ ಸಂವಹನ ಸಾಧ್ಯವಾಗಿರುವುದರಿಂದ ಯಾರು ಬೇಕಾದರೂ ನಿಯಂತ್ರಿಸಬಹುದು. ತೂಕ ಕಡಿಮೆ ಇರುವುದರಿಂದ ಆರಾಮಾಗಿ ಸಾಗಣೆ ಮಾಡಬಹುದು.
ಪ್ರೊ. ಅಕ್ಷಯ್ ಮಾಶೆಲ್ಕರ್ ಹತ್ತು ಹಲವು ವೈಜ್ಞಾನಿಕ ಉಪಕರಣಗಳನ್ನು ತಯಾರಿಸಿದ್ದಾರೆ. ಅವರು ತಯಾರಿಸಿದ ಚಿಕ್ಕ ಸೋಲಾರ್ ಪ್ರಾಜೆಕ್ಟ್ ಸೇರಿದಂತೆ ಅನೇಕ ಉಪಕರಣ ಮಾಡೆಲ್‌ಗಳು ಗಮನ ಸೆಳೆಯುತ್ತಿವೆ. ಡಾ. ವಿಕ್ರಂ ಸಾರಾಭಾಯ್ ಸೈನ್ಸ್ ಮತ್ತು ಮ್ಯಾಥಮೆಟಿಕ್ಸ್ ರಿಸೆರ್ಚ್ ಸೆಂಟರ್ ತೆರೆದಿರುವ ಅಕ್ಷಯ್ ವಿವಿಧ ಶಾಲೆಗಳ ಮಕ್ಕಳಿಗೆ ವಿಜ್ಞಾನದ ಮಾಡೆಲ್ ಮಾಡಲು ನೆರವು ನೀಡುತ್ತಿದ್ದಾರೆ. ಈ ಹಿಂದೆ ಲಯನ್ಸ್ ಶಾಲೆಯ ಮಕ್ಕಳಿಗೆ ಗ್ಯಾಸ್ ಗೀಸರ್ನಿಂದ ಆಗುವ ಅವಘಡ ತಡೆಯುವ ಬಗ್ಗೆ ವಿಷಯ ಮಂಡಿಸಲು ಸಹಕಾರಿಯಾಗಿದ್ದರು. ಜತೆಗೆ ವಿಷಯ ಮಂಡಿಸಿದ ವಿದ್ಯಾರ್ಥಿಗಳು ಯುವ ವಿಜ್ಞಾನಿ ಪ್ರಶಸ್ತಿಗೂ ಭಾಜನರಾಗಿದ್ದರು.
ಇದನ್ನೂ ಓದಿ:ಮಾತನಾಡುವ ರೋಬೋಟ್ ತಯಾರಕ ಈ 14ರ ಪೋರ ಸಿಡಾನ್..!