ಹಾಸನ: ಮೈದುಂಬಿ ಹರಿಯುತ್ತಿರುವ ಮೂಕನಮನೆ ಜಲಪಾತ.. ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ
ಹಾಸನ:ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಭಾರಿ ಮಳೆಯಿಂದ ಮೂಕನಮನೆ ಜಲಪಾತ ತುಂಬಿ ಹರಿಯುತ್ತಿದೆ. ಜಲಪಾತ ವೀಕ್ಷಣೆಗೆ ಬಂದು ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಲಾಗಿದೆ. ಶನಿವಾರ ಸಂಜೆ ಬೆಂಗಳೂರಿನಿಂದ ಸಕಲೇಶಪುರ ತಾಲೂಕಿನ ಮೂಕನಮನೆ ಜಲಪಾತ ವೀಕ್ಷಿಸಲು ನಾಲ್ವರು ಸ್ನೇಹಿತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಭಾರಿ ಮಳೆಯಿಂದ ಜಲಪಾತದಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗಿದೆ. ಈ ವೇಳೆ ಜಲಪಾತಕ್ಕೆ ಇಳಿದಿದ್ದ ಸಂಜಯ್ ಎಂಬ ಪ್ರವಾಸಿಗನ ಸುತ್ತಲೂ ನೀರು ಆವರಿಸಿಕೊಂಡಿದೆ. ನಂತರ ಸಂಜಯ್ ಹರಸಾಹಸಪಟ್ಟು ಈಜಿ ಬಂಡೆಯೊಂದರ ಮೇಲೆ ಕುಳಿತಿದ್ದಾನೆ.
ಈ ವೇಳೆ ಸ್ಥಳದಲ್ಲಿದ್ದ ಪ್ರವಾಸಿ ಪೊಲೀಸರಾದ ಅಶ್ರಫ್, ವಡಿವೇಲ್ ಹಾಗೂ ಸ್ನೇಹಿತರು ಮತ್ತು ಇತರ ಪ್ರವಾಸಿಗರ ಸಹಾಯದಿಂದ ನೀರಿನಲ್ಲಿ ಸಿಲುಕಿದ್ದ ಸಂಜಯ್‌ಗೆ ರಕ್ಷಣಾ ಕವಚ ನೀಡಿ ಹಗ್ಗಕಟ್ಟಿ ಹೊರಗೆ ಎಳೆದು ತಂದಿದ್ದಾರೆ. ಕೊಂಚ ಎಡವಟ್ಟಾದರೂ ಪ್ರವಾಸಿಗ ಸಂಜಯ್ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ಪ್ರವಾಸಿ ಪೊಲೀಸರು ಹಾಗೂ ಗೆಳೆಯರ ಸಮಯ ಪ್ರಜ್ಞೆ ಹಾಗೂ ಸ್ಥಳದಲ್ಲೇ ಇದ್ದ ಇತರೆ ಪ್ರವಾಸಿಗರ ನೆರವಿನೊಂದಿಗೆ ಈತನನ್ನು ರಕ್ಷಣೆ ಮಾಡಿದ್ದು, ಅನಾಹುತವೊಂದು ತಪ್ಪಿದಂತಾಗಿದೆ.
ಮಳೆಗಾಲದಲ್ಲಿ ಜಲಪಾತಗಳಿಗೆ ಇಳಿಯುವ ಮುನ್ನ ಪ್ರವಾಸಿಗರು ಯೋಚನೆ ಮಾಡಿ ನೀರಿಗಿಳಿಯಬೇಕಿದೆ. ಅಲ್ಲದೇ ಈ ಅವಧಿಯಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ ಜಿಲ್ಲಾ ಮತ್ತು ತಾಲೂಕು ಆಡಳಿತ ಸೂಚನೆ ನೀಡಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.