ರಾಯಚೂರು: ಮಳೆ ನೀರಿಗೆ ತೊಯ್ದ ಎಪಿಎಂಸಿ ಆವರಣದಲ್ಲಿದ್ದ ಭತ್ತದ ರಾಶಿ - ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತ
Published : Nov 7, 2023, 10:03 AM IST
ರಾಯಚೂರು:ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿದೆ. ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ರಾಯಚೂರು ಜಿಲ್ಲೆಯಲ್ಲೂ ಜೋರು ಮಳೆ ಸುರಿದಿದ್ದು, ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ರೈತರು ತಂದಿದ್ದ ಭತ್ತ ಮಳೆ ನೀರಿನಲ್ಲಿ ಸಂಪೂರ್ಣ ತೊಯ್ದುಹೋಗಿದೆ. ಇದರಿಂದಾಗಿ ರೈತರಿಗೆ ಬೆಲೆ ಕುಸಿತದ ಆತಂಕ ಎದುರಾಗಿದೆ.
ಜಿಲ್ಲೆಯ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದಿದ್ದ ಭತ್ತವನ್ನು ಮಾರಾಟ ಮಾಡಲು ನಗರದ ರಾಜೇಂದ್ರ ಗಂಜ್ ಹತ್ತಿರದ ಎಪಿಎಂಸಿ ಮಾರುಕಟ್ಟೆಗೆ ತಂದಿದ್ದರು. ಆದರೆ ನಿನ್ನೆ ಮತ್ತು ಇಂದು ಸುರಿದ ಮಳೆಯಿಂದಾಗಿ ಮಾರುಕಟ್ಟೆಯ ಆವರಣದಲ್ಲಿ ಇರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಭತ್ತ ಒದ್ದೆಯಾಗಿದೆ. ಇದರಿಂದ ಕಡಿಮೆ ಇಳುವರಿ ನಡುವೆ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಬರಗಾಲ ಸಂದರ್ಭದಲ್ಲಿ ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೈತರು ಯಾವುದೇ ಬೆಳೆಯನ್ನು ಎಪಿಎಂಸಿಗೆ ತಂದಾಗ ಬೆಳೆ ನಷ್ಟವಾಗದಂತೆ ನೋಡಿಕೊಳ್ಳುವುದು ಎಪಿಎಂಸಿ ಆಡಳಿತ ಮಂಡಳಿಯ ಕೆಲಸವಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಷ್ಟಪಟ್ಟು ಬೆಳೆದಿದ್ದ ಭತ್ತ ನೀರು ಪಾಲಾಗಿದೆ ರೈತರು ಅಳಲು ತೋಡಿಕೊಂಡರು.