ಕೊಡಗಿನಲ್ಲಿ ಮಳೆರಾಯನ ಆರ್ಭಟ; ಗುಡ್ಡ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಆತಂಕ- ವಿಡಿಯೋ - ಮಡಿಕೇರಿ ಸುದ್ದಿ
ಕೊಡಗು:ಜಿಲ್ಲೆಯಲ್ಲಿ ಮಳೆ ಕಳೆದ ಮೂರು ದಿನಗಳಿಂದ ಬಿಡದೇ ಸುರಿಯುತ್ತಿದ್ದು ರಸ್ತೆಗಳೆಲ್ಲ ಸಂಪೂರ್ಣ ಜಲಾವೃತಗೊಂಡಿವೆ. ಕಾವೇರಿಯ ಉಗಮ ಸ್ಥಾನ ಮತ್ತು ಭಾಗಮಂಡಲದಲ್ಲಿ ಮಳೆ ಹೆಚ್ಚಾಗಿದ್ದು, ದೇವಸ್ಥಾನದ ಮುಂಭಾಗ ನೀರು ತುಂಬಿಕೊಂಡು ಸಮಸ್ಯೆಯುಂಟಾಗಿದೆ. ಕಾವೇರಿ ನದಿ, ಉಪನದಿಗಳು ಮೈದುಂಬಿ ಹರಿಯುತ್ತಿದೆ. ಮಳೆಯೊಂದಿಗಿನ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಗಾಳಿಸಹಿತ ಮಳೆ ಹೆಚ್ಚಾದ ಕಾರಣ ಭಾಗಮಂಡಲದ ಸುತ್ತಮುತ್ತಲಿನ ಪ್ರದೇಶದ ಬೆಟ್ಟ ಗುಡ್ಡಗಳಲ್ಲಿ ವಾಸಮಾಡುವ ಜನರಲ್ಲಿ ಆತಂಕ ಮನೆಮಾಡಿದೆ.
3 ದಿನದಲ್ಲಿ ಹಾರಂಗಿ ಜಲಾಶಯ ಮತ್ತು ಕೆಆರ್‌ಎಸ್ ಅಣೆಕಟ್ಟು ತುಂಬುವ ಸಾಧ್ಯತೆ ಕೂಡ ಇದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಕೊಡಗು- ಸಂಪಾಜೆ ಗ್ರಾಮದ ಕೊಯನಾಡು ಅರಣ್ಯ ಇಲಾಖೆ ಕಚೇರಿಯ ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ ಇದೆ. ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಲಾಗಿದೆ. ಮುಖ್ಯ ರಸ್ತೆಯ ಬದಿಯಲ್ಲಿ ಕಳೆದ ಸಲ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಇದನ್ನೂ ಓದಿ:ಕಾರವಾರದಲ್ಲಿ ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು, ಕೃಷಿ ಭೂಮಿ ಜಲಾವೃತ