ಸಿಎಂ ಭಾಷಣದ ವೇಳೆ ಗುಡುಗು ಸಹಿತ ಮಳೆ.. ತಲೆ ಮೇಲೆ ಕುರ್ಚಿ ಹೊತ್ತು ನಿಂತ ಜನ
ಹಾವೇರಿ :ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾಷಣದ ವೇಳೆ ಮಳೆ ಸುರಿದಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ನಡೆದಿದೆ. ನಗರದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಬೊಮ್ಮಾಯಿ ಮಾತನಾಡುತ್ತಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುತ್ತಿರುವಾಗ ಗುಡುಗು ಸಹಿತ ಮಳೆ ಆರಂಭವಾಯಿತು. ಆದರೂ ಭಾಷಣ ಮುಂದುವರೆಸಿದ ಅವರು ಮಳೆ ಬರುವುದು ಸಮೃದ್ಧಿಯ ಸಂಕೇತ. ಕಾರ್ಯಕ್ರಮದ ಮಧ್ಯೆ ಮಳೆ ಬಂದಿದೆ. ಇದು ಶುಭ ಸಂಕೇತ ಎಂದು ಹೇಳಿದರು.
ಮಳೆ ಬರುತ್ತಿದ್ದರೂ ಹಾಗೇ ನಿಂತು ನನ್ನ ಮಾತುಗಳನ್ನು ಕೇಳ್ತಾ ಇದ್ದೀರಾ. ನಿಮಗೆ ಕೋಟಿ ಕೋಟಿ ನಮನಗಳು. ನಾನು ಸಿಎಂ ಆದರೂ ನಿಮಗೆ ನಾನು ಬಸವರಾಜ ಬೊಮ್ಮಾಯಿ ಮಾತ್ರ. ನಿಮಗೆ ಕೈ ಮುಗಿದು ಕೇಳುತ್ತೇನೆ ಮುಂಬರುವ ದಿನಗಳಲ್ಲಿ ನಮಗೆ ಆಶೀರ್ವಾದ ಮಾಡಿ ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿದರು. ಮಳೆಯಲ್ಲೂ ಸಿಎಂ ಭಾಷಣ ಆಲಿಸಿದ ಜನರು ಕುರ್ಚಿಗಳನ್ನು ತಲೆ ಮೇಲೆ ಇಟ್ಟುಕೊಂಡು ಮಳೆಯಿಂದ ರಕ್ಷಣೆ ಪಡೆದುಕೊಂಡ ದೃಶ್ಯ ಕಂಡುಬಂತು.
ಇದನ್ನೂ ಓದಿ :ಮಾರಮ್ಮ ಜಾತ್ರಾ ಮಹೋತ್ಸವ: 18 ಅಡಿ ಉದ್ಧದ ಸರಳುಗಳನ್ನು ಬಾಯಿಗೆ ಚುಚ್ಚಿಕೊಂಡು ಭಕ್ತಿ ಪರಾಕಾಷ್ಠೆ