ಮಳೆಗಾಗಿ ಪ್ರಾರ್ಥಿಸಿ ದೇವರಿಗೆ ಜಲದಿಗ್ಬಂಧನ ಹಾಕಿದ ಜನರು- ವಿಡಿಯೋ - ಸೂರ್ಯನಾರಾಯಣ ದೇವರು
ಬೆಳಗಾವಿ:ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ಇಲ್ಲಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಜನರು ದೇವರಿಗೆ ಜಲದಿಗ್ಬಂಧನ ಹಾಕಿದ ಕುತೂಹಲದ ಘಟನೆ ಕಿತ್ತೂರು ತಾಲೂಕಿನಲ್ಲಿ ಇಂದು ನಡೆಯಿತು. ಸೂರ್ಯ ನಾರಾಯಣ ದೇವಸ್ಥಾನದ ಗರ್ಭಗುಡಿ ಸುತ್ತಲೂ ನೀರು ಹಾಕಿದ್ದಾರೆ. ಮಲಪ್ರಭಾ ನದಿ ನೀರು ಹಾಗು ಕೊಳವೆಬಾವಿ ನೀರನ್ನು ಮಡಿಯಿಂದ ಬಿಂದಿಗೆಯಲ್ಲಿ ತೆಗೆದುಕೊಂಡು ಬಂದ ಗ್ರಾಮಸ್ಥರು ಗರ್ಭಗುಡಿಗೆ ಚೆಲ್ಲಿದ್ದಾರೆ. ಈ ಮೂಲಕ ಮಳೆ ಸುರಿಯಲೆಂದು ಜನರು ಶ್ರದ್ಧೆ, ಭಕ್ತಿಯಿಂದ ಪ್ರಾರ್ಥಿಸಿದ್ದಾರೆ.
ಗರ್ಭಗುಡಿಯಲ್ಲಿ ದೇವರನ್ನು ನೀರಲ್ಲಿ ನಿಲ್ಲಿಸಿ ಜಲ ದಿಗ್ಬಂಧನ ವಿಧಿಸಿ, ಬೀಗ ಹಾಕಿದರೆ ಮಳೆಯಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಏಳು ದಿನಗಳ ಕಾಲ ಜಲದಿಗ್ಬಂಧನ ಹಾಕಿದರೆ ಮಳೆಯಾಗುತ್ತದೆ ಎಂಬುದು ವಾಡಿಕೆ. ಬರಗಾಲದ ಸೂಚನೆ ಸಿಕ್ಕಾಗ ಗ್ರಾಮಸ್ಥರು ಈ ರೀತಿ ಜಲದಿಗ್ಬಂಧನ ಹಾಕುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹೀಗೆ ಜಲದಿಗ್ಬಂಧನ ಹಾಕಿದಾಗ ಮಳೆಯಾಗಿರುವ ನಿದರ್ಶನಗಳೂ ಇವೆಯಂತೆ. ಏಳು ದಿನಗಳ ನಂತರ ದೇವಸ್ಥಾನದ ಬಾಗಿಲನ್ನು ಗ್ರಾಮಸ್ಥರು ತೆರೆಯುತ್ತಾರೆ.
ಇದನ್ನೂಓದಿ:ಮಕ್ಕಳಲ್ಲಿ ಕಿವಿ ಸೋಂಕು ಅಪಾಯ ಹೆಚ್ಚಿಸುತ್ತಿದೆ ವಾಟರ್ಪಾರ್ಕ್, ಈಜುಕೊಳಗಳು: ವೈದ್ಯರ ಎಚ್ಚರಿಕೆ