ಹಳಿ ದಾಟುತ್ತಿದ್ದ ಆನೆಗಳ ಹಿಂಡು..ಗಜಪಡೆ ಸುರಕ್ಷತೆಗೆ ಎಕ್ಸ್‌ಪ್ರೆಸ್ ನಿಲ್ಲಿಸಿದ ಅಧಿಕಾರಿಗಳು -WATCH VIDEO
Published : Nov 4, 2023, 6:03 PM IST
ಹೊಜೈ(ಅಸ್ಸೋಂ ): ಕಾಡಾನೆಗಳ ದೊಡ್ಡ ಹಿಂಡೊಂದು ರೈಲು ಹಳಿ ದಾಟುತ್ತಿದ್ದು, ಈ ವೇಳೆ ಅದೇ ಹಳಿಯಲ್ಲಿ ಬರುತ್ತಿದ್ದ ರೈಲನ್ನು ರೈಲ್ವೆ ಅಧಿಕಾರಿಗಳು ನಿಲ್ಲಿಸಿ ಆಗ ಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ. ಅಸ್ಸೋಂನಲ್ಲಿ ಕಾಡಾನೆಗಳ ಹಾವಳಿ ಹೆಚ್ಚು. ಇಲ್ಲಿ ಆಗಾಗ್ಗೆ ಮಾನವ ಹಾಗೂ ಆನೆಗಳ ನಡುವೆ ಸಂಘರ್ಷ ನಡೆಯುತ್ತಿರುತ್ತದೆ. ಆದರೆ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಮತ್ತು ಸರ್ಕಾರ ಮಾತ್ರ ಸೂಕ್ತ ಕ್ರಮವನ್ನು ತೆಗೆದುಕೊಳ್ಳದೇ ಇದ್ದು, ಸಾರ್ವಜನಿಕರು ಬೇಸತ್ತಿದ್ದಾರೆ. ಇಲ್ಲಿ ರೈಲುಗಳಿಗೆ ಹಳಿ ದಾಟುತ್ತಿದ್ದ ಆನೆಗಳು ಸಿಕ್ಕಿ ಸಾವನ್ನಪ್ಪಿದ್ದ ಹಲವಾರು ಘಟನೆಗಳು ನಡೆದಿದೆ. ಕೇವಲ ಆನೆಗಳ ಸಾವಲ್ಲದೆ,ಈ ರೀತಿ ಡಿಕ್ಕಿ ಹೊಡೆಯುವುದರಿಂದ ರೈಲುಗಳು ಹಳಿ ತಪ್ಪುವ ಸಾಧ್ಯತೆ ಹೆಚ್ಚಿದೆ.
ಈ ಕುರಿತು ಜನರು ಎಚ್ಚರಿಕೆಯನ್ನು ನೀಡಿದ್ದಾರೆ. ಇಂದು ಕೂಡ ಇದೇ ರೀತಿಯ ದೊಡ್ಡ ದುರ್ಘಟನೆಯೇ ನಡೆದು ಹೋಗುತ್ತಿತ್ತು. ಆದರೆ ರೈಲ್ವೆ ಅಧಿಕಾರಿಗಳ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರಿಂದಾಗಿ ಪ್ರಾಣ ಉಳಿದಿದೆ. ದಿಬ್ರುಗಢ್‌ನಿಂದ ಕನ್ಯಾಕುಮಾರಿವರೆಗಿನ 15906 ವಿವೇಕ್ ಎಕ್ಸ್‌ಪ್ರೆಸ್ ರೈಲು ಹೊಜೈ ಜಿಲ್ಲೆಯ ಹಬೈಪುರ್-ಲಂಸಖಾಂಗ್ ರೈಲು ನಿಲ್ದಾಣದ ನಡುವೆ ತಡರಾತ್ರಿ ಸಂಚರಿಸುವ ವೇಳೆ ಆನೆಗಳ ದೊಡ್ಡ ಹಿಂಡು ರೈಲು ಹಳಿಗಳನ್ನು ದಾಟುತ್ತಿತ್ತು, ತಕ್ಷಣವೇ ರೈಲ್ವೆ ಅಧಿಕಾರಿಗಳು ಬರುತ್ತಿದ್ದ ವಿವೇಕ್ ಎಕ್ಸ್‌ಪ್ರೆಸ್ ಅನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನೆಗಳ ಹಿಂಡೆಲ್ಲ ಸುರಕ್ಷಿತವಾಗಿ ಕರ್ಬಿ ಆಂಗ್ಲಾಂಗ್ ದಿಕ್ಕಿನಿಂದ ಲುಮ್ಡಿಂಗ್‌ನ ಅರಣ್ಯ ಪ್ರದೇಶಗಳ ಕಡೆಗೆ ಹಳಿ ದಾಟಿ ಸಾಗಿದ ನಂತರ ವಿವೇಕ್ ಎಕ್ಸ್‌ಪ್ರೆಸ್ ಹೊರಟಿದೆ.
ಇದನ್ನೂ ಓದಿ:Earthquake shocks: ಉತ್ತರಪ್ರದೇಶದ 50 ಜಿಲ್ಲೆಗಳಲ್ಲಿ ನಡುಗಿದ ಭೂಮಿ.. ಮನೆ ಬಿಟ್ಟು ಓಡಿ ಬಂದ ಜನರು