ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪುಣ್ಯಸ್ಮರಣೆ.. ಮಂಡ್ಯದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ - ಭಾರತೀಯ ಚಿತ್ರರಂಗ
Published : Oct 29, 2023, 10:57 PM IST
ಮಂಡ್ಯ:ಭಾರತೀಯ ಚಿತ್ರರಂಗ ಅದರಲ್ಲಿಯೂ ಕನ್ನಡ ಚಿತ್ರೋದ್ಯಮಕ್ಕೆ ಅಪಾರ ಕೊಡುಗೆ ನೀಡಿದ ಡಾ ಪುನೀತ್‌ರಾಜ್‌ಕುಮಾರ್ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಎಚ್. ಎಲ್. ನಾಗರಾಜು ಹೇಳಿದರು.
ಭಾನುವಾರ ಮಂಡ್ಯ ನಗರದ ಎಸ್ ಬಿ ಸಮುದಾಯ ಭವನದಲ್ಲಿ ಡಾ ಪುನೀತ್ ರಾಜ್‌ಕುಮಾರ್ ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಿಮಿತ್ತ ಏರ್ಪಡಿಸಿದ್ದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಪ್ಪು ಅವರು ಚಿಕ್ಕವಯಸ್ಸಿಗೆ ಚಿತ್ರರಂಗ ಪ್ರವೇಶ ಮಾಡಿ, ಬಾಲನಟರಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಕೀರ್ತಿವಂತರು. ಅವರ ತಂದೆ ಡಾ. ರಾಜಕುಮಾರ್ ಹಾದಿಯಲ್ಲಿ ನಡೆದು ಚಿತ್ರರಂಗದೊಂದಿಗೆ ಅಪಾರ ಸಮಾಜಮುಖಿ ಸೇವೆಗಳನ್ನು ಮಾಡಿ ಕಣ್ಮರೆಯಾದ ಮಹಾಚೇತನ ಪುನೀತ್ ಅವರನ್ನು ಸ್ಮರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಜೀವಧಾರೆ ಟ್ರಸ್ಟ್ ನಟರಾಜ್ ಹಾಗೂ ಅವರ ತಂಡವು ಯಾವುದೇ ಪ್ರಚಾರವಿಲ್ಲದೆ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಮಂಡ್ಯ ಜಿಲ್ಲೆಗೆ ರಾಜ್ಯಮಟ್ಟದಲ್ಲಿ ಉತ್ತಮ ಹೆಸರು ತಂದುಕೊಡಲು ಪ್ರಯತ್ನಪಡುತ್ತಿದೆ ಎಂದು ತಿಳಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿದರು. ಡಾ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗ, ಜಿಲ್ಲಾ ರಕ್ತನಿಧಿಕೇಂದ್ರ ಮಿಮ್ಸ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಆಶ್ರಯದಲ್ಲಿ ಈ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಇದನ್ನೂಓದಿ:ಮೈಸೂರು ದಸರಾ ಯಶಸ್ವಿ, ಅಧಿಕಾರಿಗಳ ಕಾರ್ಯನಿರ್ವಹಣೆಗೆ ಸಚಿವ ಮಹದೇವಪ್ಪ ಮೆಚ್ಚುಗೆ