ಶಿಥಿಲ ನೀರಿನ ಟ್ಯಾಂಕ್ ಕೆಡವಲು ಆಗ್ರಹ: ಟ್ಯಾಂಕ್ ಮೇಲೇರಿ ಪಂಚಾಯತ್ ಸದಸ್ಯರ ಪ್ರತಿಭಟನೆ
ಶಿವಮೊಗ್ಗ: ಶಿಥಿಲಗೊಂಡಿರುವ ಕುಡಿಯುವ ನೀರಿನ ಟ್ಯಾಂಕ್ ಕೆಡವಿ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರು ಟ್ಯಾಂಕ್ ಮೇಲೇರಿ ಪ್ರತಿಭಟನೆ ನಡೆಸಿರುವ ಘಟನೆ ಹೊಸನಗರ ತಾಲೂಕು ಮಾರುತಿಪುರ ಗ್ರಾಮದಲ್ಲಿ ನಡೆಯಿತು. ಪಂಚಾಯತಿ ಬಳಿಯೇ ನೀರಿನ ಟ್ಯಾಂಕ್ ಇದೆ. ಇದನ್ನು ಕೆಡವಿ ಹೊಸ ಟ್ಯಾಂಕ್ ನಿರ್ಮಿಸಲು ಜಿಲ್ಲಾ ಪಂಚಾಯತ್ನಲ್ಲಿ ತೀರ್ಮಾನವಾಗಿದ್ದು, 94.22 ಲಕ್ಷ ರೂಪಾಯಿ ನಿಗದಿ ಮಾಡಿ ವರ್ಷ ಕಳೆದಿದೆ. ಆದರೂ ಇನ್ನೂ ಟ್ಯಾಂಕ್ ಕೆಡವಿಲ್ಲ. ಟ್ಯಾಂಕ್ ಕುಸಿಯುವ ಸ್ಥಿತಿಯಲ್ಲಿದೆ. ಅನಾಹುತವಾದರೆ ತಾಲೂಕು ಮತ್ತು ಜಿಲ್ಲಾಡಳಿತ ಗ್ರಾಮ ಪಂಚಾಯತಿಯನ್ನೇ ಹೊಣೆ ಮಾಡುತ್ತದೆ. ಹೀಗಾಗಿ, ಪಂಚಾಯತಿ ಅಧ್ಯಕ್ಷ ಚಿದಾನಂದ ಹಾಗೂ ಸದಸ್ಯರಾದ ಇಂದ್ರೇಶ್, ಪ್ರಕಾಶ್, ಶ್ರೀಧರ್ ಶೆಟ್ಟಿ ಎಲ್ಲರೂ ಟ್ಯಾಂಕ್ ಮೇಲೇರಿ ಜಿಲ್ಲಾ ಪಂಚಾಯತ್ ಸಿಇಒ ಸ್ಥಳಕ್ಕೆ ಬಂದು ಲಿಖಿತ ಆದೇಶ ನೀಡುವವರೆಗೂ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟಿಸಿದರು.
ಮೊದಲು ಪ್ರತಿಭಟನಾಕಾರರ ಮನವೊಲಿಸಿ ಕೆಳಗಿಳಿಸಲು ಪೊಲೀಸರು ಪ್ರಯತ್ನಿಸಿದರು. ನಂತರ ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಆದರೂ ಕೆಳಗಿಳಿಯದೇ ಪ್ರತಿಭಟನೆ ಮುಂದುವರೆಸಿದ್ದಾರೆ. ಶಿವಮೊಗ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಭಾವಿ ಕಾರ್ಯಪಾಲಕ ಅಭಿಯಂತರ ಸ್ಥಳಕ್ಕೆ ಬಂದು ಜಲಜೀವನ್ ಮಿಷನ್ ಯೋಜನೆಯಡಿ ಓವರ್ ಹೆಡ್ ಟ್ಯಾಂಕರ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. 20 ದಿನಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ಕಾಮಗಾರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಲಿಖಿತವಾಗಿ ಬರೆದುಕೊಟ್ಟ ನಂತರ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.
ಇದನ್ನೂ ಓದಿ:ಗೂಳಿ ಓಟಕ್ಕೆ ಅನುಮತಿ ನಿರಾಕರಿಸಿದ್ದಕ್ಕೆ ಆಕ್ರೋಶ: ಹೊಸೂರು-ಬೆಂಗಳೂರು ಹೆದ್ದಾರಿ ತಡೆ, ಬಸ್ಗಳಿಗೆ ಕಲ್ಲು