ಮೂಡಿಗೆರೆ: ರಸ್ತೆ ಗುಂಡಿಗಳಲ್ಲಿ ಸಸಿ ನೆಟ್ಟು, ಮೀನು ಹಿಡಿಯುವ ಮೂಲಕ ಪ್ರತಿಭಟನೆ - ಮೂಡಿಗೆರೆ ರಸ್ತೆ ದುರಸ್ತಿಗೆ ಒತ್ತಾಯ
Published : Aug 28, 2023, 7:39 PM IST
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಪಟ್ಟಣದ ರಸ್ತೆ ಗುಂಡಿಗಳಲ್ಲಿ ಮೀನು ಹಿಡಿದು, ಭತ್ತದ ಸಸಿ, ಬಾಳೆಗಿಡಗಳಲ್ಲಿ ನಾಟಿ ಮಾಡುವ ಅಣುಕು ಪ್ರದರ್ಶನ ಮಾಡಿ, ಗುಂಡಿ ಬಿದ್ದ ರಸ್ತೆ ದುರಸ್ತಿಗೆ ಆಗ್ರಹಿಸಿ ಸಚೇತನ ಯುವ ಸಂಘದ ವತಿಯಿಂದ ಇಂದು ವಿನೂತನ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಎಸ್‌ಬಿಐ ಮತ್ತು ಚರ್ಚ್ ಹಾಲ್ ನಡುವೆ ಸುಮಾರು ನೂರು ಮೀಟರ್ ರಸ್ತೆ ಗುಂಡಿ ಬಿದ್ದಿದ್ದು, ದುರಸ್ಥಿಗೆ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮೂಡಿಗೆರೆ-ಮಂಗಳೂರು-ಬೇಲೂರು ಹೆದ್ದಾರಿಗಳ ನಡುವೆ ಪ್ರಮುಖ ಸಂಪರ್ಕವಾಗಿರುವ ಈ ರಸ್ತೆಯು ಹಲವು ವರ್ಷಗಳಿಂದ ರಿಪೇರಿಯಾಗದೇ ಉಳಿದಿದೆ. ರಸ್ತೆ ತುಂಬೆಲ್ಲ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ವಾಹನ ಸವಾರರು ಪರದಾಡುತ್ತಿದ್ದಾರೆ. ಇತ್ತೀಚೆಗೆ ಮಳೆಯಿಂದಾಗಿ ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗಿತ್ತು.
ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯಾಧಿಕಾರಿ ಚಂದ್ರಕಾ, ಮನವಿ ಪತ್ರ ಸ್ವೀಕರಿಸಿದರು. ನಗರೋತ್ಥಾನ ಯೋಜನೆಯಡಿ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಮುತುವರ್ಜಿ ವಹಿಸಲಾಗಿದೆ ಎಂದರು.
ಸಚೇತನ ಯುವ ಸಂಘದ ಅಧ್ಯಕ್ಷ ರವಿರಾಜ್ ಮಾತನಾಡಿ, ನಗರೋತ್ಥಾನ ಯೋಜನೆಯಲ್ಲಿ ಕಳೆದ ವರ್ಷ ಸರ್ಕಾರದಿಂದ 5 ಕೋಟಿ ರೂ. ಅನುದಾನ ಬಂದಿದೆ. ಈ ಅನುದಾನವನ್ನು ವಿವಿಧ ರಸ್ತೆಗಳ ಅಭಿವೃದ್ಧಿಗೆ ವಿನಿಯೋಗಿಸಲು ಕ್ರಿಯಾಯೋಜನೆ ತಯಾರಿಸಿದ್ದರು, ಅದು ನನೆಗುದಿಗೆ ಬಿದ್ದಿದೆ. ಈ ರಸ್ತೆಗಳಿಗೆ ಕಳೆದ 25 ವರ್ಷದ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಆ ನಂತರ ರಸ್ತೆ ಗುಂಡಿಗಳನ್ನು ಕೂಡ ಮುಚ್ಚಿಲ್ಲ. ಅದಷ್ಟು ಬೇಗ ಕಾಮಕಾರಿ ಮಾಡದಿದ್ದರೆ ಮೂಡಿಗೆರೆ ಪಟ್ಟಣ ಬಂದ್ಗೆ ಕರೆ ನೀಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ :ಕಾವೇರಿ ನೀರು ವಿವಾದ: ಕೆಆರ್ಎಸ್ ಮುತ್ತಿಗೆಗೆ ಯತ್ನಿಸಿದ ಕರವೇ ಪ್ರತಿಭಟನಾಕಾರರು