'ತಮಿಳುನಾಡಿಗೆ ನೀರು, ಕರ್ನಾಟಕಕ್ಕೆ ನೇಣು': ಮಂಡ್ಯದಲ್ಲಿ ರೈತರ ಪ್ರತಿಭಟನೆ - etv bharat kannada
Published : Aug 25, 2023, 3:41 PM IST
ಮಂಡ್ಯ:ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುವ ಮೂಲಕ ರೈತರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೇಣು ಭಾಗ್ಯ ಕಲ್ಪಿಸಿದೆ ಎಂದು ಶ್ರೀರಂಗಪಟ್ಟಣದಲ್ಲಿ ಇಂದ ರೈತರು ನೇಣು ಕುಣಿಕೆ ಹಿಡಿದು ಪ್ರತಿಭಟಿಸಿದರು. ರೈತ ಸಂಘ ಮತ್ತು ಭೂಮಿ ತಾಯಿ ಹೋರಾಟ ಸಮಿತಿ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಪಟ್ಟಣದ ಕುವೆಂಪು ವೃತ್ತದಿಂದ ಮೆರವಣಿಗೆ ಹೊರಟ ರೈತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿರುದ್ಧ ಧಿಕ್ಕಾರ ಕೂಗುತ್ತಾ ತಾಲೂಕು ಕಚೇರಿವರೆಗೂ ತೆರಳಿ ಧರಣಿ ನಡೆಸಿದರು. ತಮಿಳುನಾಡಿಗೆ ನೀರು, ಕರ್ನಾಟಕಕ್ಕೆ ನೇಣು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ದ್ರೋಹ ಮಾಡಿರುವ ರಾಜ್ಯ ಸರ್ಕಾರ ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿ ಜಲಾಶಯ ಖಾಲಿ ಮಾಡುತ್ತಿದೆ. ಇಲ್ಲಿನ ರೈತರಿಗೆ ನಾಟಿ ಮಾಡಲೂ ಸಹ ನೀರು ನೀಡದೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು. ಗ್ಯಾರಂಟಿ ಭಾಗ್ಯದ ಹೆಸರಲ್ಲಿ ಅಧಿಕಾರಕ್ಕೆ ಬಂದು ನೆರೆ ರಾಜಕ್ಕೆ ನೀರು ಬಿಟ್ಟು ರೈತರಿಗೆ ನೇಣು ಭಾಗ್ಯ ನೀಡುತ್ತಿದೆ. ಕೆಆರ್ಎಸ್ ಜಲಾಶಯದಿಂದ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಜಿಲ್ಲೆಯ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ನಂಜುಂಡೇಗೌಡ, ರೈತ ಸಂಘದ ಉಪಾಧ್ಯಕ್ಷ ಹನಿಯಂಬಾಡಿ ನಾಗರಾಜ್, ಮೇಳಾಪುರ ದೇವರಾಜ್, ಶಿವರಾಜ್ ಕೆಂಪಣ್ಣ, ಕೂಡ್ಲು ಕುಪ್ಪೆ ರವಿ, ರಾಮಣ್ಣ ಕಡತನಾಳು ಪುರುಷೋತ್ತಮ ಚಂದಗಾಲು, ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣೇಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಕಾವೇರಿ ನೀರಿನ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಿ: ಸಿಎಂಗೆ ಶೋಭಾ ಕರಂದ್ಲಾಜೆ ಆಗ್ರಹ