ರಾಯಚೂರು: ಕೆಳಭಾಗದ ಕಾಲುವೆಗಳಿಗೆ ನೀರು ಹರಿಸುವಂತೆ ರೈತರಿಂದ ಪ್ರತಿಭಟನೆ
ರಾಯಚೂರು:ತುಂಗಭದ್ರಾ ಎಡದಂಡೆಯ ಕೆಳಭಾಗದ ಉಪಕಾಲುವೆಗಳಿಗೆ ನೀರು ಹರಿಸದೇ ಇರುವುದನ್ನು ಖಂಡಿಸಿ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಹಾಗೂ ರೈತ ಸಂಘಟನೆಗಳು ಸಾಥ್‌ಮೈಲ್ ಕ್ರಾಸ್ ಬಳಿಯ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರಾಯಚೂರು ಜಿಲ್ಲೆಯ ಮಾನ್ವಿ, ಸಿರವಾರ, ರಾಯಚೂರು ತಾಲೂಕಿನ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ವ್ಯಾಪ್ತಿಗೆ ಬರುವ ಉಪಕಾಲುವೆಗೆ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನಿಸಿದಂತೆ ಕಾಲುವೆಗೆ ನೀರು ಹರಿಸಬೇಕು. ಆದರೆ, ಕಾಲುವೆಯಲ್ಲಿ ನಿಗದಿ ಪ್ರಮಾಣದಂತೆ ನೀರು ಹರಿದು ಬರುತ್ತಿಲ್ಲ. ಪರಿಣಾಮ ಕೆಲಭಾಗದ ರೈತರ ಹೊಲದಲ್ಲಿ ಬಿತ್ತನೆ ಮಾಡಿದ ಮೆಣಸಿನಕಾಯಿ, ಶೇಂಗಾ, ಭತ್ತ ಸೇರಿದಂತೆ ಇತರ ಬೆಳೆಗಳಿಗೆ ನೀರಿಲ್ಲದೇ ಒಣಗುತ್ತಿದ್ದು, ರೈತರನ್ನು ಕಂಗಾಲಾಗುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಳಭಾಗದ ರೈತರು ಈ ಸಂಬಂಧ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ಮೇಲ್ಭಾಗದ ರೈತರು ಅಕ್ರಮವಾಗಿ ನೀರನ್ನು ಬಳಸಿಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಜಮೀನನ್ನು ಹೊರತುಪಡಿಸಿದಂತೆ, ಯಥೇಚ್ಛವಾಗಿ ಅಕ್ರಮ ನೀರಾವರಿ ಪ್ರದೇಶ ಮಾಡಲಾಗಿದೆ. ಇದರಿಂದ ಕೆಳಭಾಗದ ರೈತರ ಜಮೀನಿಗೆ ನೀರು ಬರದೇ ತೊಂದರೆ ಅನುಭವಿಸುತ್ತಿದ್ದಾರೆ, ಕೂಡಲೇ ಕೆಳಭಾಗದ ಉಪಕಾಲುವೆಗಳ ರೈತರ ಹೊಲಗಳಿಗೆ ನೀರು ಹರಿಸುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಇನ್ನು ಸಾಥ್‌ಮೈಲ್ ಕ್ರಾಸ್ ರಸ್ತೆ ತಡೆದಿದ್ದರಿಂದ ರಾಯಚೂರು - ಲಿಂಗಸೂಗೂರು ಹಾಗೂ ರಾಯಚೂರು - ಸಿಂಧನೂರು ರಸ್ತೆ ಸಂಚಾರಕ್ಕೆ ಅಡಿ ಉಂಟಾಗಿತ್ತು. ನೀರಿಗಾಗಿ ಒತ್ತಾಯಿಸಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿರುವ ವೇಳೆ ಆಂಬ್ಯುಲೆನ್ಸ್ ರಸ್ತೆಯಲ್ಲಿ ಸಿಲುಕಿಕೊಂಡಿದೆ ತಕ್ಷಣ ಅಲ್ಲಿಗೆ ಧಾವಿಸಿದ ಪೊಲೀಸರು ಹಾಗೂ ಶಾಸಕರು ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಟ್ಟರು.
ಇದನ್ನೂ ಓದಿ:ರೈತನಿಗೆ ಭೂಸ್ವಾಧೀನ ಪರಿಹಾರ ನೀಡದ ಹಿನ್ನೆಲೆ: ಉಪವಿಭಾಗಾಧಿಕಾರಿ ಕಚೇರಿ, ಕಾರು ಜಪ್ತಿ