ಮಂಡ್ಯ: ಕಾವೇರಿ ನದಿಗಿಳಿದು ರೈತರಿಂದ ಪ್ರತಿಭಟನೆ - etv bharat kannada
Published : Aug 23, 2023, 9:27 PM IST
ಮಂಡ್ಯ:ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಶ್ರೀರಂಗಪಟ್ಟಣ ಸುತ್ತಮುತ್ತಲಿನ ರೈತರು ಇಂದು ನಗರದ ಸ್ನಾನಘಟ್ಟದ ಬಳಿ ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಮತ್ತು ಜಲ ಸಂಪನ್ಮೂಲ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯೆದುರು ಭಾರತೀಯ ಕಿಸಾನ್ ಸಂಘದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಿತು. ತಕ್ಷಣವೇ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲವಾದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಭಾರತೀಯ ಕಿಸಾನ್ ಸಂಘದ ರಮೇಶ್ ರಾಜು ಮಾತನಾಡಿ, "ಭಾರತೀಯ ಕಿಸಾನ್ ಸಂಘದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಯಾವುದೇ ಆದೇಶವಿಲ್ಲದಿದ್ದರೂ ಕಾವೇರಿ ಜಲಾಯಶದಿಂದ ತಮಿಳುನಾಡಿಗೆ ಸುಮಾರು 10 ಅಡಿ ನೀರನ್ನು ಹರಿಸಿದ್ದಾರೆ. ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕಾವೇರಿ ಭಾಗದ ಪ್ರದೇಶಗಳಲ್ಲಿ ಬೇಕಾದಷ್ಟು ಮಳೆಯಾಗಿಲ್ಲ ಎಂಬ ಆತಂಕ ಇದೆ. ಹೀಗಾಗಿ ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ:'ಸರ್ವಪಕ್ಷಗಳ ಸಭೆ ನಾಟಕ': ರೈತ ಮುಖಂಡ ಕುರುಬೂರು ಶಾಂತಕುಮಾರ್