ಪ್ರಜಾಧ್ವನಿ ಸಮಾವೇಶ ಮುಗಿದ ಕೂಡಲೇ ಬ್ಯಾನರ್ ಹರಿದ ಕಿಡಿಗೇಡಿಗಳು: ಕಾಂಗ್ರೆಸ್ ಪ್ರತಿಭಟನೆ - ಈಟಿವಿ ಭಾರತ ಕನ್ನಡ
ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ): ಪ್ರಜಾಧ್ವನಿ ಯಾತ್ರೆಯ ಫ್ಲೆಕ್ಸ್ ಹರಿದ ಕಿಡಿಗೇಡಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಗರಸಭೆ ಪೌರಾಯುಕ್ತರು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಜಗನ್ನಾಥ್ ಮಾಧ್ಯಮದೊಂದಿಗೆ ಮಾತನಾಡಿ, "ಕಿಡಿಗೇಡಿಗಳು ಫ್ಲೆಕ್ಸ್ ಹರಿದು ತೇಜೋವಧೆ ಮಾಡಿದ್ದಾರೆ. ನಮ್ಮನ್ನು ಸುಖಾಸುಮ್ಮನೆ ಕೆಣಕುತ್ತಿದ್ದು, ನಾವು ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಕೆಲವು ಪಕ್ಷದವರ ಫ್ಲೆಕ್ಸನ್ನು ದಿನಗಟ್ಟಲೆ ಬಿಟ್ಟಿರುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದವರ ಫ್ಲೆಕ್ಸ್, ಬ್ಯಾನರ್ ಅನ್ನು ರಾತ್ರೋರಾತ್ರಿ ತೆರವು ಮಾಡುತ್ತಿದ್ದಾರೆ. ನಗರಸಭೆಯ ಅಧಿಕಾರಿಗಳ ಪಕ್ಷಪಾತ ಧೋರಣೆ ಯಾವುದೇ ಕಾರಣಕ್ಕೂ ಒಪ್ಪುವಂಥದ್ದಲ್ಲ" ಎಂದು ಹೇಳಿದರು. ಇದೇ ವೇಳೆ "ಒಂದು ಪಕ್ಷದ ಪರ ಕೆಲಸ ಮಾಡುತ್ತಿರುವ ನಗರಸಭೆ ಪೌರಾಯುಕ್ತರನ್ನು ತಕ್ಷಣ ಅಮಾನತು ಮಾಡಬೇಕು" ಎಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ಶಾಸಕ ವೆಂಕಟರಮಣಯ್ಯ, "ರಾಜಕೀಯ ಪಕ್ಷಗಳು ಸಭೆ ಸಮಾರಂಭ ಮಾಡಿದಾಗ ಬ್ಯಾನರ್ ಮತ್ತು ಫ್ಲೆಕ್ಸ್ಗಳನ್ನು ಕಟ್ಟೋದು ಸಾಮಾನ್ಯ. ಈ ಫ್ಲೆಕ್ಸ್ಗಳಿಗೆ ಮೂರರಿಂದ ಐದು ದಿನ ಅವಕಾಶ ನೀಡಿ ಅನಂತರ ಯಾವುದೇ ಪಕ್ಷಪಾತ ಮಾಡದೆ ತೆರವು ಮಾಡಬೇಕು. ಆದರೆ ನಮ್ಮ ಪಕ್ಷದಿಂದ ಅಳವಡಿಸಿದ್ದ ಫ್ಲೆಕ್ಸ್ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ" ಎಂದರು.
"ಬ್ಯಾನರ್ ಮತ್ತು ಫ್ಲೆಕ್ಸ್ಗಳ ಕುರಿತು ಮುಖಂಡರಲ್ಲಿ ಮಾಹಿತಿ ಕೊರತೆ ಇದ್ದು, ಇದಕ್ಕೆ ಸಂಬಂಧಿಸಿ ಸರ್ವ ಪಕ್ಷ ಮತ್ತು ಸಂಘ ಸಂಸ್ಥೆಗಳನ್ನು ಕರೆದು ಸಭೆ ನಡೆಸಿ ಮಾಹಿತಿ ನೀಡಲಾಗುವುದು ಮತ್ತು ನಗರಸಭೆ ವ್ಯಾಪ್ತಿಯ ಎಲ್ಲಾ ಪಕ್ಷದ ಬ್ಯಾನರ್ಗಳನ್ನು ಜನವರಿ 26ರ ಸಂಜೆಯ ವೇಳೆಗೆ ಸಂಪೂರ್ಣ ತೆರವುಗೊಳಿಸುತ್ತೇವೆ" ಎಂದು ಪೌರಾಯುಕ್ತ ಶಿವಶಂಕರ್ ತಿಳಿಸಿದರು.