ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ಹಣ ಸಿಕ್ಕ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಆಗ್ಬೇಕು: ಡಾ ಜಿ ಪರಮೇಶ್ವರ್ ಆಗ್ರಹ - ಈಟಿವಿ ಭಾರತ ಕನ್ನಡ
ತುಮಕೂರು : ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಪುತ್ರನ ಮನೆಯಲ್ಲಿ ಹಣ ಸಿಕ್ಕ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಆಗಬೇಕು. ಮತ್ತು ಈ ಹಣದ ಮೂಲ ಯಾವುದು ಎಂಬ ಬಗ್ಗೆ ಗೊತ್ತಾಗಬೇಕು ಎಂದು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ಜಿಲ್ಲೆಯ ಕೊರಟಗೆರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಆಡಳಿತ ಯಾವ ಮಟ್ಟಕ್ಕೆ ಹೋಗಿದೆ ಎಂಬುದು ಗೊತ್ತಾಗುತ್ತಿದೆ. ಓರ್ವ ಶಾಸಕರ ಕಚೇರಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಣ ಸಿಗುತ್ತದೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ಇದನ್ನು ಅವರು ಬೇರೆ ಬೇರೆ ರೀತಿ ಬಿಂಬಿಸಬಹುದು. ಆದರೆ ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಮತ್ತು ಹಣದ ಮೂಲ ಗೊತ್ತಾಗಬೇಕು ಎಂದು ಹೇಳಿದರು.
ಮೇಲ್ನೋಟಕ್ಕೆ ಒಬ್ಬ ಶಾಸಕನ ಕಚೇರಿಯಲ್ಲಿ ಇಷ್ಟೊಂದು ಕೋಟಿ ಹಣ ಎಲ್ಲಿಂದ ಬಂತು ಎಂಬುದು ಎಲ್ಲರಲ್ಲೂ ಸ್ವಾಭಾವಿಕವಾಗಿ ಮೂಡುವ ಪ್ರಶ್ನೆ. ಬಿಜೆಪಿಯವರು ಹೊರಗಡೆ ದೊಡ್ಡದಾಗಿ ಮಾತನಾಡುತ್ತಾರೆ. ಈ ವಿದ್ಯಮಾನಗಳನ್ನು ನೋಡಿದಾಗ ಬಿಜೆಪಿ ಆಡಳಿತ ಹೇಗಿದೆ ಎಂಬುದು ಗೊತ್ತಾಗುತ್ತದೆ ಎಂದು ಟೀಕಿಸಿದರು.
ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಹಾಗೂ ಅವರ ಕಚೇರಿಯಲ್ಲಿ ಇಷ್ಟೊಂದು ಹಣ ಸಿಗುತ್ತದೆ ಅಂದರೆ ಆಶ್ಚರ್ಯಕರವಾಗಿದೆ. ಅವರ ಸ್ವಂತ ಹಣವೋ ಏನು ಎಂಬ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಅವರು ಹೇಳುವ ಪ್ರಕಾರ ನಾವು ಅಡಕೆ ವ್ಯಾಪಾರ ಮಾಡುತ್ತೇವೆ. ಅಡಕೆ ವಹಿವಾಟಿನ ಹಣ ಇರಬಹುದು ಎನ್ನುತ್ತಾರೆ. ಆದರೆ ಓರ್ವ ಶಾಸಕರ ಕಚೇರಿಯಲ್ಲಿ ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಸ್ವಾಭಾವಿಕವಾಗಿ ಪ್ರತಿಯೊಬ್ಬರು ಕೇಳಬೇಕಿದೆ ಎಂದರು.
ಇದನ್ನೂ ಓದಿ :ಉದ್ಯಮಿ ನಿವಾಸದ ಮೇಲೆ ಸಿಸಿಬಿ ದಾಳಿ: ಮೂರು ಕೋಟಿ ನಗದು ವಶ