ಬೆಳಗಾವಿಯಲ್ಲಿ ಕನ್ನಡ ಧ್ವಜ ತೆರವು: ಪ್ರತಿಭಟನೆ ನಡೆಸಿದ ಕನ್ನಡ ಪರ ಹೋರಾಟಗಾರರು - etv bharat karnataka
Published : Dec 19, 2023, 10:44 PM IST
ಬೆಳಗಾವಿ: ಕನ್ನಡ ಧ್ವಜವನ್ನು ಕಿಡಿಗೇಡಿಗಳು ತೆರವುಗೊಳಿಸಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ.
ಮಚ್ಛೆ ಗ್ರಾಮದ ಬ್ರಹ್ಮಲಿಂಗೇಶ್ವರ ಜಾತ್ರೆ ನಿಮಿತ್ತ ಎಂಇಎಸ್‌ನಿಂದ ಭಗವಾಧ್ವಜ ಅಳವಡಿಕೆ ಮಾಡಲಾಗಿತ್ತು. ಭಗವಾ ಧ್ವಜ ಅಳವಡಿಕೆ ಮಾಡುತ್ತಿದ್ದಂತೆ, ಕನ್ನಡ ಧ್ವಜವನ್ನು ಕನ್ನಡ ಪರ ಹೋರಾಟಗಾರರು ಹಾರಿಸಿದ್ದರು. ನಿನ್ನೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಆವರಣದ ಮರದ ಮೇಲೆ ಕನ್ನಡ ಧ್ವಜ ಅಳವಡಿಸಲಾಗಿತ್ತು. ಈ ಕನ್ನಡ ಧ್ವಜವನ್ನು ರಾತ್ರೋರಾತ್ರಿ ಕಿಡಿಗೇಡಿಗಳು ತೆರವು ಮಾಡಿದ್ದರು.
ಇದರಿಂದ ಆಕ್ರೋಶಗೊಂಡ ಕನ್ನಡ ಪರ ಹೋರಾಟಗಾರರು ಮತ್ತೆ ಕನ್ನಡ ಧ್ವಜ ಅಳವಡಿಸಲು ಬಂದ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆದಿದೆ. ಈ ವೇಳೆ ಕನ್ನಡ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು. ನಂತರ ಮಚ್ಛೆ ಗ್ರಾಮ ಪಂಚಾಯಿತಿಗೆ ತೆರಳಿ ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಐವತ್ತು ವರ್ಷ ಪೂರ್ಣವಾಗಿ ಸುವರ್ಣ ಸಂಭ್ರಮಾಚರಣೆ ಸಂದರ್ಭದಲ್ಲಿ ಕನ್ನಡ ಧ್ವಜ ಅಳವಡಿಕೆಗೆ ಅವಕಾಶ ಇಲ್ಲವೇ ಎಂದು ಪೊಲೀಸರ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಮತ್ತೆ ದೇವಸ್ಥಾನ ಬಳಿಯ ಮರದ ಮೇಲೆ ಕನ್ನಡ ಧ್ವಜವನ್ನು ಅಳವಡಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿದ ಕೊರೊನಾ ಆತಂಕ: ಕೇರಳ ಪ್ರವಾಸಿಗರ ತಡೆಗೆ ಒತ್ತಾಯ