ಕಾಂಗ್ರೆಸ್ನವರು ಕರೆಂಟ್ ಕಡಿಮೆ ಕೊಡುತ್ತಿದ್ದರಿಂದ ಜನಸಂಖ್ಯೆ ಜಾಸ್ತಿ ಆಯ್ತು: ಪ್ರಹ್ಲಾದ್ ಜೋಶಿ - congress gurantee
ಬೆಳಗಾವಿ: ಮೊದಲು ಹಳ್ಳಿಗಳಲ್ಲಿ ವಿದ್ಯುತ್ ಇರುತ್ತಿರಲಿಲ್ಲ ನರೇಂದ್ರ ಮೋದಿ ಅವರು ಬಂದ ಮೇಲೆ ಹಳ್ಳಿಗಳಲ್ಲಿ 24ಗಂಟೆ ವಿದ್ಯುತ್ ಪೂರೈಕೆ ಆಗುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ಕರೆಂಟ್ ಕೊಡುತ್ತಿರಲಿಲ್ಲ ಇದರಿಂದ ಜನಸಂಖ್ಯೆ ಜಾಸ್ತಿ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.
ಬೆಳಗಾವಿ ಜಿಲ್ಲೆಯ ಸವದತ್ತಿ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ಮಾಜಿ ಸಿಎಂ ಸಿದ್ದರಾಮಯ್ಯನವರು ಚಾಮುಂಡಿ ದೇವಿಯ ಶಾಪದಿಂದ ಚಾಮುಂಡಿಯಲ್ಲಿ ಸೋತರು. ಇಲ್ಲಿ ಬನಶಂಕರಿ ದೇವಿಯ ಶಾಪದಿಂದ ಬಾದಾಮಿ ಕ್ಷೇತ್ರವನ್ನು ಬಿಟ್ಟು ಕೋಲಾರ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ಆ ಕ್ಷೇತ್ರದಲ್ಲೂ ಅವರಿಗೆ ಚುನಾವಣೆಯಲ್ಲಿ ಸೋಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಭವಿಷ್ಯ ನುಡಿದರು.
ಕಾಂಗ್ರೆಸ್ ಪಾರ್ಟಿ ಸುಳ್ಳು ಹೇಳುವ ಪಕ್ಷವಾಗಿದೆ, ಸುಳ್ಳು ಹೇಳುವುದೇ ಅವರ ಚಾಳಿ, 2004ರಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಮೀಸಲಾತಿ ನೀಡುತ್ತೇವೆ ಎಂದು ಕಾಂಗ್ರೆಸ್ನವರು ಭರವಸೆ ನೀಡಿ ಕೊಡಲಿಲ್ಲ, ಆದರೆ, ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಕೊಡಬೇಕಾಯಿತು. ಅವರು ನೀಡಿದ ಯಾವುದೇ ಆಶ್ವಾಸನೆ ಈಡೇರಿಸಲಿಲ್ಲ. ಈಗ ಕಾಂಗ್ರೆಸ್ ಗ್ಯಾರಂಟಿ ಅಂತ ಹೇಳುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಅಲ್ಲ ಕಾಂಗ್ರೆಸ್ ಮನೆಗೆ ಹೊಗುವುದು ಗ್ಯಾರಂಟಿ ಎಂದು ಟಾಂಗ್ ನೀಡಿದರು.
ರಾಹುಲ್ ಬಾಬಾ 2012ರಲ್ಲಿ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದರೆ ಹತ್ತು ದಿನದಲ್ಲಿ ನಾವು ಎಲ್ಲ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದರು. ಆದರೆ, ಯಾವುದೇ ಸಾಲ ಮನ್ನಾ ಮಾಡಲಿಲ್ಲ. ಇನ್ನ ಕರ್ನಾಟಕದಲ್ಲಿ ಹೇಗೆ ವಿದ್ಯುತ್ ಉಚಿತ ನೀಡುತ್ತಾರೆ ಎಂದು ಪ್ರಶ್ನಿಸಿದರು. ನರೇಂದ್ರ ಮೋದಿ ಬಂದ ಮೇಲೆ ಹಳ್ಳಿಗಳಲ್ಲಿ 24ಗಂಟೆ ಕಾಲ ವಿದ್ಯುತ್ ಪೂರೈಕೆ ಆಗುತ್ತಿದೆ. ಕಾಂಗ್ರೆಸ್ ಕಾಲದಲ್ಲಿ ಕರೆಂಟ್ ಕೊಡುತ್ತಿರಲಿಲ್ಲ ಇದರಿಂದ ಜನಸಂಖ್ಯೆ ಜಾಸ್ತಿ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು
ಇದನ್ನೂ ಓದಿ:ನಾನು ಕಿಂಗೋ, ಕಿಂಗ್ ಮೇಕರೋ ಸ್ವಲ್ಪ ಕಾದು ನೋಡಿ : ಜನಾರ್ದನ ರೆಡ್ಡಿ