ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹಾವಿಗೆ ಮರುಜೀವ ನೀಡಿದ ಪೊಲೀಸ್ ಕಾನ್‌ಸ್ಟೆಬಲ್: ವಿಡಿಯೋ ನೋಡಿ
Published : Oct 26, 2023, 10:53 PM IST
|Updated : Oct 26, 2023, 11:00 PM IST
ನರ್ಮದಾಪುರಂ (ಮಧ್ಯಪ್ರದೇಶ) : ಪ್ರಜ್ಞೆ ಕಳೆದುಕೊಂಡು ಉಸಿರಾಡಲೂ ಸಾಧ್ಯವಾಗದೆ ಜೀವನ್ಮರಣದ ನಡುವೆ ಒದ್ದಾಡುತ್ತಿದ್ದ ಧಮನ್ ಜಾತಿಯ ಹಾವಿಗೆ ಸಿಪಿಆರ್ ನೀಡಿ ಪೊಲೀಸ್ ಕಾನ್ಸ್ಟೆಬಲ್ವೊಬ್ಬರು ಮರುಜೀವ ನೀಡಿದರು. ಹಾವಿಗೆ ಸಿಪಿಆರ್ ನೀಡುವ ಸಂಪೂರ್ಣ ಘಟನೆಯ ವಿಡಿಯೋವನ್ನು ಇತರ ಸಹೋದ್ಯೋಗಿಗಳು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸ್ ಕಾನ್ಸ್ಟೇಬಲ್ ಅತುಲ್ ಶರ್ಮಾ ಅವರು ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಸೆಮಿಹರ್‌ಚಂದ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶರ್ಮಾ 12ನೇ ತರಗತಿಯಿಂದ ಹಾವುಗಳನ್ನು ರಕ್ಷಿಸುತ್ತಿದ್ದಾರೆ. ಬುಧವಾರ ದಸರಾ ಕರ್ತವ್ಯದಲ್ಲಿದ್ದ ವೇಳೆ, ರೈಲ್ವೇ ನಿಲ್ದಾಣದ ಸಮೀಪದ ತವಾ ಕಾಲೋನಿಯ ಮನೆಯೊಂದರಲ್ಲಿ ಹಾವು ಇರುವ ಮಾಹಿತಿ ಸಿಕ್ಕಿದೆ. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಇದಕ್ಕೂ ಮೊದಲು ಪೈಪ್‌ನಲ್ಲಿ ಸಿಲುಕಿದ್ದ ಹಾವು ಹೊರತೆಗೆಯಲು ಸ್ಥಳೀಯರು ನೀರಿನಲ್ಲಿ ಕೀಟನಾಶಕ ಬೆರೆಸಿ ಸುರಿದಿದ್ದಾರೆ. ಇದರಿಂದ ಹಾವು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು.
ಹಾವಿಗೆ ಮೊದಲು ಶುದ್ಧ ನೀರು ಸುರಿದು ಪ್ರಜ್ಞೆ ಬರಿಸಲು ಕಾನ್‌ಸ್ಟೆಬಲ್ ಪ್ರಯತ್ನಿಸಿದ್ದಾರೆ. ನಂತರ ಕೀಟನಾಶಕವನ್ನು ಹೊರತೆಗೆದು, ಅದಕ್ಕೆ ತನ್ನ ಬಾಯಿಯಿಂದ ಸಿಪಿಆರ್ ನೀಡಿದ್ದಾರೆ. ಇದಾದ ಬಳಿಕ ಹಾವಿಗೆ ಪ್ರಜ್ಞೆ ಬಂದಿದೆ. ಕಾನ್ಸ್ಸ್ಟೆಬಲ್ ಹಾವಿಗೆ ಕುಡಿಯಲು ನೀರು ಕೂಡ ಕೊಟ್ಟರು. ಮರುಜೀವ ಪಡೆದ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
ಇದನ್ನೂ ಓದಿ:ಹಂಪಿಯಲ್ಲಿ ಅಪರೂಪದ ಬಿಳಿ ಮಣ್ಣು ಮುಕ್ಕ ಹಾವು ಪತ್ತೆ: ವಿಡಿಯೋ