ಭಾಷಣದ ವೇಳೆ ಕುಸಿದು ಬಿದ್ದ ವೇದಿಕೆ; ವೇದಿಕೆಯಿಂದ ಜಿಗಿದು ಪಾರಾದ ಅನ್ಬುಮಣಿ ರಾಮದಾಸ್
ತಮಿಳುನಾಡು:ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಅಧ್ಯಕ್ಷ ಡಾ. ಅನ್ಬುಮಣಿ ರಾಮದಾಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ನಿಂತಿದ್ದ ವೇದಿಕೆ ಕುಸಿದು ಬಿದ್ದಿರುವ ಘಟನೆ ಸೇಲಂ ಜಿಲ್ಲೆಯ ವಾಜಪಾಡಿಯಲ್ಲಿ ನಡೆದಿದೆ. ಸೇಲಂ ಜಿಲ್ಲೆಯಲ್ಲಿರುವ ಉತ್ತರ ಪಕ್ಷದ ಘಟಕದ ಪದಾಧಿಕಾರಿಗಳು ಪಕ್ಷದ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಪಕ್ಷದ ಅಧ್ಯಕ್ಷ ಡಾ.ಅನ್ಬುಮಣಿ ರಾಮದಾಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ನಿಂತಾಗ ವೇದಿಕೆ ಕುಸಿದು ಬಿದ್ದಿದೆ. ಅಚ್ಚರಿ ಎನ್ನುವಂತೆ ರಾಮದಾಸ್ ಕ್ಷಣಾರ್ಧದಲ್ಲಿ ವೇದಿಕೆಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ, ಅನ್ಬುಮಣಿ ರಾಮದಾಸ್ ಅವರೊಂದಿಗೆ ವೇದಿಕೆಯಲ್ಲಿ ನಿಂತಿದ್ದ ಪಕ್ಷದ ಕೆಲವು ಸದಸ್ಯರು ವೇದಿಕೆಯೊಂದಿಗೆ ಕೆಳಗೆ ಬಿದ್ದಿದ್ದಾರೆ. ಸದ್ಯ ಅವರಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕುಸಿದು ಬಿದ್ದಿರುವ ಚಿಕ್ಕ ವೇದಿಕೆಯನ್ನು ವಾಜಪಾಡಿ ಬಸ್ ನಿಲ್ದಾಣದ ಸಮೀಪದಲ್ಲಿ ನಿರ್ಮಿಸಲಾಗಿತ್ತು. ಆ ಚಿಕ್ಕ ವೇದಿಕೆಯಲ್ಲಿ ಅದರ ಸಾಮರ್ಥ್ಯ ಮೀರಿ ಸದಸ್ಯರೆಲ್ಲರೂ ವೇದಿಕೆಯಲ್ಲಿ ನಿಂತಿದ್ದರಿಂದ ಅದು ಕುಸಿದು ಬೀಳಲು ಕಾರಣವಾಗಿದೆ. ಘಟನೆ ನಂತರ ಅನ್ಬುಮಣಿ ರಾಮದಾಸ್ ಅವರು ಹತ್ತಿರದ ಅಂಗಡಿಯಿಂದ ತಂದ ಮೇಜಿನ ಮೇಲೆ ನಿಂತು ತಮ್ಮ ಭಾಷಣವನ್ನು ಮುಂದುವರೆಸಿದ್ದಾರೆ. ಅಲ್ಲದೆ ಭಾಷಣದಲ್ಲಿ ವನ್ನಿಯಾರ್‌ಗಳಿಗೆ ಶೇಕಡಾ 10.5 ರಷ್ಟು ಕೋಟಾವನ್ನು ಜಾರಿಗೆ ತರಬೇಕೆಂದು ಟಿಎನ್ ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ:ಕಣ್ಣೀರು ಹಾಕಿ ಮತ ಯಾಚಿಸಿದ ಮಾಜಿ ಶಾಸಕ ರಮೇಶ್ ಬಾಬು; ಶಾಸಕ ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯ