ಬೆಂಗಳೂರಿನಲ್ಲಿ ಮೋದಿ ಕಿರು ರೋಡ್ ಶೋ: ರಾಷ್ಟ್ರಧ್ವಜ ಪ್ರದರ್ಶಿಸಿದ ಅಭಿಮಾನಿಗಳು - ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್
Published : Aug 26, 2023, 8:53 AM IST
ಬೆಂಗಳೂರು : ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್ ಸಫಲವಾದ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಯಾವುದೇ ರೋಡ್ ಶೋ ಆಯೋಜನೆ ಮಾಡದೇ ಇದ್ದರೂ ಮೋದಿ ನೋಡುವ ಹಂಬಲದೊಂದಿಗೆ ಬಂದಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಕಾರಿನ ದ್ವಾರದಲ್ಲಿ ನಿಂತು ಅಭಿಮಾನಿಗಳತ್ತಾ ಕೈ ಬೀಸುತ್ತಾ ಸಾಗಿದರು.
ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಹೆಚ್.ಎ.ಎಲ್ ನಿಂದ ರಸ್ತೆ ಮಾರ್ಗವಾಗಿ ಆಗಮಿಸಿದರು. ತುಮಕೂರು ರಸ್ತೆ ಮೂಲಕ ಜಾಲಹಳ್ಳಿ ಕ್ರಾಸ್ಗೆ ಬಂದ ಮೋದಿ ಸಂಚರಿಸುತ್ತಿದ್ದ ವಾಹನ ಇಸ್ರೋ ಮಾರ್ಗಕ್ಕೆ ತಿರುಗಿತು. ಈ ವೇಳೆ, ಮೋದಿ ನೋಡಲು ಜನಸಾಗರವೇ ಹರದುಬಂದು ರಸ್ತೆಯ ಇಕ್ಕೆಲಗಳಲ್ಲಿ ಜಮಾವಣೆಯಾಗಿತ್ತು, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಜಯಘೋಷ ಮೊಳಗಿಸುತ್ತಾ ಮೋದಿ ನೋಡಲು ನಸುಕಿನಿಂದಲೇ ಜನತೆ ಕಾದು ನಿಂತಿದ್ದರು. ಈ ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಮೋದಿ ರೋಡ್ ಶೋ ನಿಗದಿಯಾಗದೇ ಇದ್ದರೂ ತಮ್ಮ ಕಾರಿನ ಬಾಗಿಲು ತೆರೆದು ಫುಟ್ ಬೋರ್ಡ್ ಮೇಲೆ ನಿಂತು ನೆರೆದಿದ್ದ ಜನಸಮೂಹದತ್ತ ಕೈಬೀಸಿ ನಮಸ್ಕರಿಸುತ್ತಾ ಸಾಗಿದರು. ಒಂದು ರೀತಿಯಲ್ಲಿ ಕಿರು ರೋಡ್ ಶೋ ನಡೆಸಿದರು. ಜನ ಸೇರಿದ್ದಷ್ಟು ದೂರವೂ ಕಾರಿನ ದ್ವಾರದಲ್ಲೇ ನಿಂತು ಸಾಗಿದರು.
ಈ ಹಿಂದೆ ಮೋದಿ ಬೆಂಗಳೂರು ಪ್ರವಾಸ ಅಂತಿಮಗೊಂಡಾಗ ಪೀಣ್ಯದಲ್ಲಿ 1 ಕಿ.ಮೀ ರೋಡ್ ಶೋ ಮಾಡಲು ಸಿದ್ಧತೆ ಮಾಡಲಾಗಿತ್ತು. ರಾಜ್ಯ ಬಿಜೆಪಿಯಿಂದ ಅಗತ್ಯ ತಯಾರಿಯೂ ನಡೆಸಲಾಗಿತ್ತು. ಆದರೆ ಎಸ್ಪಿ ಅನುಮತಿ ನೀಡದ ಹಿನ್ನೆಲೆಯಲ್ಲಿ ರೋಡ್ ಶೋ ನಿರ್ಧಾರ ಕೈಬಿಡಲಾಗಿತ್ತು. ಹಾಗಾಗಿ, ತೆರೆದ ವಾಹನದ ಬದಲು ಅಧಿಕೃತ ಕಾರಿನಲ್ಲಿಯೇ ಕಾನ್ವಾಯ್ ಮೂಲಕ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಲೇ ಕಾರಿನ ಫುಟ್ ಬೋರ್ಡ್ ಮೇಲೆ ನಿಂತು ಕಾರ್ಯಕರ್ತರತ್ತ ಕೈಬೀಸಿದರು.
ಮೋದಿ ಸ್ವಾಗತದ ವೇಳೆ ಎಲ್ಲರೂ ರಾಷ್ಟ್ರಧ್ವಜ ಹಿಡಿದುಕೊಳ್ಳಲು, ಪ್ರಧಾನಿ ಮತ್ತು ಇಸ್ರೋ ವಿಜ್ಞಾನಿಗಳಿಗೆ ಮಾತ್ರ ಘೋಷಣೆ ಹಾಕಲು ಕಾರ್ಯಕರ್ತರಿಗೆ ಸೂಚಿಸಲಾಗಿತ್ತು. ಇಲ್ಲಿ ಬಿಜೆಪಿ ಪರ ಘೋಷಣೆ ಹಾಕದಂತೆ ಹಾಗೂ ಬಿಜೆಪಿ ಧ್ವಜ ಪ್ರದರ್ಶಿಸದಂತೆ ನಿರ್ದೇಶನ ನೀಡಿದ್ದು, ಅದರಂತೆ ಕಾರ್ಯಕರ್ತರು ಅಭಿಮಾನಿಗಳು ನಡೆದುಕೊಂಡರು.
ಇದನ್ನೂ ಓದಿ :'ಜೈ ಜವಾನ್, ಜೈ ವಿಜ್ಞಾನ,' ಇಸ್ರೋ ವಿಜ್ಞಾನಿಗಳನ್ನು ಮನಸಾರೆ ಶ್ಲಾಘಿಸಿದ ಪ್ರಧಾನಿ ಮೋದಿ