ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬೆಂಗಳೂರಿನಲ್ಲಿ ಮೋದಿ ರೋಡ್ ಶೋ: ವಿಡಿಯೋ - ವಿಧಾನಸಭಾ ಚುನಾವಣೆ
ಬೆಂಗಳೂರು:ರಾಜ್ಯದಲ್ಲಿ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ 6.5 ಕಿ.ಮೀ ರೋಡ್ ಶೋ ಆರಂಭಿಸಿದರು. ಹೊಸ ತಿಪ್ಪಸಂದ್ರ ರಸ್ತೆಯಲ್ಲಿರುವ ಕೆಂಪೇಗೌಡ ಪ್ರತಿಮೆಯಿಂದ ಟ್ರಿನಿಟಿ ವೃತ್ತದವರೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಅವರು ರೋಡ್ ಶೋ ನಡೆಸಿದರು.
ಕೆಂಪೇಗೌಡರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಪ್ರಾರಂಭವಾದ ರೋಡ್ ಶೋ ಮಧ್ಯ ಬೆಂಗಳೂರಿನ ಕೆಲವು ಭಾಗಗಳ ಮೂಲಕ ಐದು ವಿಧಾನಸಭಾ ಕ್ಷೇತ್ರಗಳನ್ನು ತಲುಪಿತು. ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದಲ್ಲಿ ಪ್ರಧಾನಿಯವರೊಂದಿಗೆ ಇದ್ದರು.
ರೋಡ್ ಶೋ ಆರಂಭದಲ್ಲಿ ಮಳೆ ಅಡ್ಡಿಪಡಿಸಿತಾದರೂ ನಂತರ ಬಿಡುವು ಕೊಟ್ಟ ಹಿನ್ನಲೆಯಲ್ಲಿ ರೋಡ್ ಶೋ ನಿರ್ವಿಘ್ನವಾಗಿ ಸಾಗಿತು. ರಸ್ತೆಯುದ್ದಕ್ಕೂ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿಂದ ರೋಡ್ ಶೋ ಸುಗಮವಾಗಿ ಸಾಗಲು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಧ್ವಜಗಳನ್ನು ಹಿಡಿದ ಪಕ್ಷದ ಸಾವಿರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಕೇಸರಿ ಶಾಲು ಮತ್ತು ಕ್ಯಾಪ್‌ಗಳನ್ನು ಧರಿಸಿದ್ದರು. ಇದರಿಂದ ಇಡೀ ರಸ್ತೆ ಕೇಸರಿಮಯವಾಗಿತ್ತು. ಇಂದು ನಡೆಯಲಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ಗಮನದಲ್ಲಿಟ್ಟುಕೊಂಡು, ಬಿಜೆಪಿ ಶುಕ್ರವಾರ ಬೆಂಗಳೂರಿನಲ್ಲಿ ಎರಡು ದಿನಗಳ ರೋಡ್ ಶೋ ನಡೆಸಲು ನಿರ್ಧರಿಸಿತ್ತು. ಶನಿವಾರ ನಗರದಲ್ಲಿ 26 ಕಿ.ಮೀ ರೋಡ್ ಶೋ ನಡೆಸಿದ ಮೋದಿ, ದಕ್ಷಿಣ ಮತ್ತು ಮಧ್ಯ ಬೆಂಗಳೂರಿನ ಭಾಗಗಳಲ್ಲಿ ಹಾದು ಸುಮಾರು 12 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ್ದರು.
ಎಲೆಕ್ಟ್ರಿಕಲ್ ಐಟಮ್ ಜೊತೆ ಬಂದಿದ್ದ ವ್ಯಕ್ತಿ: ಬ್ಯಾಗ್ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆ ಪೊಲೀಸರು ವ್ಯಕ್ತಿಯನ್ನು ತಡೆದು ಪರಿಶೀಲನೆ ನಡೆಸಿದರು. ಬೈಕ್ನಲ್ಲಿ ಬ್ಯಾಗ್ ತಂದಿದ್ದ ವ್ಯಕ್ತಿ ತಂದ ಬ್ಯಾಗ್ನಲ್ಲಿ ಕೆಲ ಎಲೆಕ್ಟ್ರಿಕಲ್ ವಸ್ತುಗಳು, ಮಷಿನ್ ಪತ್ತೆಯಾಯಿತು. ಪರಿಶೀಲನೆ ನಡೆಸಿ ಸ್ಥಳದಲ್ಲೇ ವ್ಯಕ್ತಿಯ ವಿಚಾರಣೆ ನಡೆಸಿದ ಪೊಲೀಸರು ಮಾಹಿತಿ ಪಡೆದುಕೊಂಡರು. ಈ ವೇಳೆ ಆತ ಎಲೆಕ್ಟ್ರಿಷಿಯನ್ ಆಗಿದ್ದು, ಕೆಲಸಕ್ಕೆ ಹೋಗುವ ಮಾರ್ಗ ಮಧ್ಯೆ ರೋಡ್ ಶೋ ನೋಡಲು ನಿಂತಿದ್ದ ಎಂಬುದು ಖಚಿತವಾದ ಬಳಿಕ ಕಳುಹಿಸಿದರು.
ಇದನ್ನೂ ಓದಿ:ಬೆಂಗಳೂರಲ್ಲಿ ಇಂದು ಮೋದಿ ರೋಡ್ ಶೋ: ಶಿವಮೊಗ್ಗ, ನಂಜನಗೂಡಲ್ಲೂ ಸಮಾವೇಶ