PM Modi Pune Visit: ಪ್ರಧಾನಿ ಮೋದಿ ಪುಣೆ ಭೇಟಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಪುಣೆ (ಮಹಾರಾಷ್ಟ್ರ): ಪ್ರಧಾನಿ ನರೇಂದ್ರ ಮೋದಿ ಇಂದು ಮಹಾರಾಷ್ಟ್ರದ ಪುಣೆಗೆ ಭೇಟಿ ನೀಡಿದ್ದಾರೆ. ಭೇಟಿಗೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಪುಣೆಯ ಅಭಿನವ್ ಚೌಕ್‌ನಲ್ಲಿ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ನಗರದಾದ್ಯಂತ 'ಮೋದಿ ಹಿಂತಿರುಗಿ' ಎಂದು ಪೋಸ್ಟರ್‌ಗಳನ್ನು ಹಾಕಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್‌ನ ಯುವ ಘಟಕ ಮಣಿಪುರ ಹಿಂಸಾಚಾರದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಪುಣೆ ನಗರದ ಕೆಲವು ಭಾಗಗಳಲ್ಲಿ ಪೋಸ್ಟರ್‌ಗಳನ್ನು ಹಾಕಿದೆ.
ಮಣಿಪುರ ಹಿಂಸಾಚಾರ ಉಲ್ಲೇಖಿಸಿ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಮೈತ್ರಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ವಿರೋಧಿಸುವ ತಮ್ಮ ನಿಲುವನ್ನು ಪ್ರಕಟಿಸಿವೆ. ಪೊಲೀಸರನ್ನು ಬಳಸಿಕೊಂಡು ನಮ್ಮನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ನಮ್ಮನ್ನು ಬಲವಂತವಾಗಿ ಬಂಧಿಸಲಾಗಿದೆ ಎಂದು ಶಾಸಕ ರವೀಂದ್ರ ದಂಗೇಕರ್ ಆರೋಪಿಸಿದ್ದಾರೆ. ಇಂದು ಶಾಸಕ ರವೀಂದ್ರ ಅವರು ಕಪ್ಪು ಬಟ್ಟೆ ಧರಿಸಿ ಅಭಿನವ್ ಚೌಕ್‌ನಲ್ಲಿ ಧರಣಿ ನಡೆಸಿದರು.
ಈ ವೇಳೆ ಶಾಸಕ ರವೀಂದ್ರ ಅವರು ಪ್ರತಿಭಟನೆಗೆ ತೆರಳುವ ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾಗ ಪೊಲೀಸರ ನಡುವೆ ಭಾರಿ ಮಾತಿನ ಚಕಮಕಿ ನಡೆದಿದೆ. ಬಳಿಕ ಪೊಲೀಸರು ಎಲ್ಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು ಎಂದು ಪೋಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಾಜ್ಯಸಭೆ ಅಂಗೀಕಾರಕ್ಕಾಗಿ ಆರು ಮಸೂದೆಗಳ ಪಟ್ಟಿ ಮಾಡಿದ ಸರ್ಕಾರ.. ಮಣಿಪುರ ಚರ್ಚೆಗೆ ಪಟ್ಟು ಹಿಡಿದ ಪ್ರತಿಪಕ್ಷಗಳು!