ಬೆಳಗಾವಿ: ಸೀಟಿ ಊದಿ, ರಕ್ತದಲ್ಲಿ ಪತ್ರ ಬರೆದು ದೈಹಿಕ ಶಿಕ್ಷಣ ಶಿಕ್ಷಕರ ವಿನೂತನ ಪ್ರತಿಭಟನೆ
Published : Dec 14, 2023, 10:04 AM IST
ಬೆಳಗಾವಿ: ಸೀಟಿ ಊದಿ ರಕ್ತದಲ್ಲಿ ಪತ್ರ ಬರೆದು ದೈಹಿಕ ಶಿಕ್ಷಕರು ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ನಿರುದ್ಯೋಗಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಧಾರವಾಡ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಕ್ತದಲ್ಲಿ ಮನವಿ ಪತ್ರ ಬರೆದುಕೊಂಡು ಬಂದ ಶಿಕ್ಷಕರು ಶೇ.95ರಷ್ಟು ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಆಗಿಲ್ಲಾ. ದೈಹಿಕ ಶಿಕ್ಷಕರಿಗೆ ಸರ್ಕಾರಿ ಕೆಲಸ ಇಲ್ಲದೆ ಪರದಾಡುವಂತಾಗಿದೆ. ಅಲ್ಲದೇ ಕಾಲೇಜು ವಿಭಾಗದಲ್ಲಿ ಒಬ್ಬರೇ ಒಬ್ಬ ದೈಹಿಕ ಶಿಕ್ಷಕರ ನೇಮಕಾತಿ ಆಗಿಲ್ಲಾ. ಸರ್ಕಾರ ಖಾಲಿ ಇರುವ ದೈಹಿಕ ಶಿಕ್ಷಕರ ನೇಮಕಾತಿ ಮಾಡಬೇಕು. ಈಗಾಗಲೇ ಗುತ್ತಿಗೆ ಆಧಾರದ ಮೇಲಿರುವ ಶಿಕ್ಷಕರ ಖಾಯಂ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸುನೀಲ್ ಗೋಲಾ, ಕಳೆದ 17 ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ದೈಹಿಕ ಶಿಕ್ಷಕರ ನೇಮಕಾತಿ ಆಗಿಲ್ಲ. ಸುಮಾರು ಒಂದೂವರೆ ಲಕ್ಷ ಶಿಕ್ಷಕರು ನಿರುದ್ಯೋಗಿಗಳಾಗಿದ್ದು, ಸಿಪಿಇಡಿ, ಬಿಪಿಇಡಿ, ಎಂಪಿಇಡಿ ಮಾಡಿದವರು ಕೆಲಸ ಸಿಗದೇ ಹೋಟೆಲ್ಗಳಲ್ಲಿ ಸಪ್ಲೈರ್ ಸೇರಿದಂತೆ ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ. ಮಂತ್ರಿಗಳು ಮತ್ತು ಸರ್ಕಾರ ಕೇವಲ ನಮಗೆ ಭರವಸೆ ಮಾತ್ರ ನೀಡುತ್ತಿವೆ.
ಈಗಲೂ ನಮ್ಮ ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಅಲ್ಲಿಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸಂಘದ ಭೀಮಾರೆಡ್ಡಿ, ರಾಜ್ಯ ಉಪಾಧ್ಯಕ್ಷ ವಿಠಲ ಜಿ., ಪದಾಧಿಕಾರಿಗಳಾದ ಮಹಾಂತೇಶ ಡಿ.ಎಚ್., ಬಸಯ್ಯ ಎಸ್.ಎಚ್., ಎಚ್.ಸಿ. ಬಾರ್ಕಿ, ಭಾಗ್ಯಶ್ರೀ ಎಸ್ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ:ಸಮಸ್ಯೆ ಹೇಳಿಕೊಂಡು ಕಣ್ಣೀರಿಟ್ಟ ಮಹಿಳೆ; ಅಧಿಕಾರಿಗಳಿಗೆ ಚಳಿ ಬಿಡಿಸಿದ ಲೋಕಾಯುಕ್ತ ಎಸ್ಪಿ