ಉರಿ ಬಿಸಿಲನ್ನು ಲೆಕ್ಕಿಸದೇ ಏರ್ ಶೋ ಕಣ್ತುಂಬಿಕೊಳ್ಳುತ್ತಿರುವ ಜನ - ಯಲಹಂಕ ವೈಮಾನಿಕ ಪ್ರದರ್ಶನ
ಯಲಹಂಕ: ಏಷ್ಯಾದ ಅತಿ ದೊಡ್ಡ ಏರ್ ಶೋ 'ಏರೋ ಇಂಡಿಯಾ 2023' ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದ್ದು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮತ್ತು ನಾಳೆ ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಏರ್ ಶೋ ಕಣ್ತುಂಬಿಕೊಳ್ಳಲು ಬೆಳಗ್ಗೆಯಿಂದಲೇ ಸಾವಿರಾರು ಜನ ಆಗಮಿಸಿದ್ದಾರೆ. ಟಿಕೆಟ್ ಸಿಗದವರು ಹಾಗೂ 12 ವರ್ಷದ ಒಳಗಿನ ಮಕ್ಕಳು ತಮ್ಮ ಪೋಷಕರೊಂದಿಗೆ ವಾಯುನೆಲೆ ಪಕ್ಕದ ಕೆರೆಕಟ್ಟೆಯ ಮೇಲೆ ನಿಂತು ಲೋಹದ ಹಕ್ಕಿಗಳ ಕಲರವ ವೀಕ್ಷಿಸುತ್ತಿದ್ದಾರೆ. ಇಂದು ಎರಡು ಶೋ ಇದ್ದು, ಸಾಕಷ್ಟು ಮಂದಿ ಉರಿ ಬಿಸಿಲನ್ನು ಲೆಕ್ಕಿಸದೆ ಹೊರಗಡೆಯಿಂದಲೇ ಏರ್ ಶೋ ನೋಡಿ ಖುಷಿಪಟ್ಟರು. ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದ್ದ ಕಾರಣ ಏರ್ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು.