ಬ್ರಹ್ಮಪುರ ನಿಲ್ದಾಣದ ಬಳಿ ರೈಲಿನಲ್ಲಿ ಕಾಣಿಸಿಕೊಂಡ ಹೊಗೆ.. ವಿಡಿಯೋ
ಭುವನೇಶ್ವರ್( ಒಡಿಶಾ) :ಬ್ರಹ್ಮಪುರ ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ದಿಬ್ರುಗಢ - ಕನ್ಯಾಕುಮಾರಿ ವಿವೇಕ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕರು ಭಯಭೀತರಾಗಿದ್ದರು. ಹೊಗೆ ಕಂಡು ಪ್ರಯಾಣಿಕರು ಚೈನ್ ಎಳೆದಿದ್ದಾರೆ ಎಂದು ವರದಿಯಾಗಿದೆ. ''ರೈಲಿನ ಬ್ರೇಕ್ ಬೈಂಡಿಂಗ್ ಕೋಚ್‌ನ ಚಕ್ರದಲ್ಲಿ ಗೋಣಿಚೀಲ ಸಿಲುಕಿದ್ದರಿಂದ ಹೊಗೆ ಕಾಣಿಸಿಕೊಂಡಿದೆ. ಘಟನೆ ನಂತರ ನಾವು ಚಕ್ರದಿಂದ ಗೋಣಿಚೀಲವನ್ನು ತೆಗೆದು ಹಾಕಿದ್ದೇವೆ. ನಂತರ ಹೊಗೆ ನಂದಿಸುವುದಕ್ಕಾಗಿ ಅಗ್ನಿಶಾಮಕ ವಾಹನ ಬಳಸಿದ್ದೇವೆ. ಈ ವೇಳೆ, ರೈಲು ಸುಮಾರು 15 - 30 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಬ್ರಹ್ಮಪುರ ನಿಲ್ದಾಣದಲ್ಲಿ ಸಂಪೂರ್ಣ ತಪಾಸಣೆ ನಡೆಸಲಾಗುವುದು'' ಎಂದು ರೈಲ್ವೆ ಅಧಿಕಾರಿ ಬಸಂತ ಕುಮಾರ್ ಸತ್ಪತಿ ತಿಳಿಸಿದ್ದಾರೆ.
ಕೇವಲ ಒಂದು ವಾರದ ಹಿಂದೆ ಅಂದರೆ ಜುಲೈ 7 ರಂದು, ರೈಲು ತೆಲಂಗಾಣದ ಯಾದಾದ್ರಿ ಜಿಲ್ಲೆಯನ್ನು ದಾಟುತ್ತಿದ್ದಾಗ ಫಲಕ್ನುಮಾ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹೌರಾ ಸಿಕಂದರಾಬಾದ್ ರೈಲನ್ನು ಬೊಮ್ಮಾಯಿಳ್ಳಿ ಗ್ರಾಮದ ಬಳಿ ನಿಲ್ಲಿಸಲಾಯಿತು ಮತ್ತು ಬೆಂಕಿ ಹರಡುವ ಮೊದಲು ಪ್ರಯಾಣಿಕರು (S3, S4, ಮತ್ತು S5) ಕಂಪಾರ್ಟ್‌ಮೆಂಟ್‌ಗಳನ್ನು ತೊರೆದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.
ಇದನ್ನೂ ಓದಿ:ಕಲಬುರಗಿ ರೈಲ್ವೆ ನಿಲ್ದಾಣ : ಎನ್ಡಿಆರ್ಎಫ್ ತಂಡದಿಂದ ರೈಲ್ವೆ ಅಪಘಾತ ಅಣಕು ಪ್ರದರ್ಶನ