ಪ್ರಯಾಣಿಕನ ಗುದನಾಳದಲ್ಲಿತ್ತು 42 ಲಕ್ಷ ರೂ ಮೌಲ್ಯದ ಚಿನ್ನ! ಹೈದರಾಬಾದ್ ಏರ್ಪೋರ್ಟ್‌ನಲ್ಲಿ ಸೆರೆ
ತೆಲಂಗಾಣ: ಗುದನಾಳದಲ್ಲಿ 42,78,768 ಮೌಲ್ಯದ 685.7 ಗ್ರಾಂ ಪೇಸ್ಟ್ ರೂಪದ ಚಿನ್ನ ಕಳ್ಳಸಾಗಾಟ ಮಾಡುತ್ತಿದ್ದ ಪ್ರಯಾಣಿಕನನ್ನು ಮಾಲುಸಮೇತ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮಸ್ಕತ್‌ನಿಂದ ಆಗಮಿಸಿದ್ದ ಭಾರತೀಯ ಪ್ರಯಾಣಿಕನೊಬ್ಬ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಖಚಿತ ಮಾಹಿತಿಯ ಆಧಾರದ ಮೇಲೆ ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಘಟಕವು ಆತನನ್ನು ತಡೆದು ಪರಿಶೀಲಿಸಿದೆ. ಈ ಸಂದರ್ಭ ಎರಡು ಮಾತ್ರೆಗಳಲ್ಲಿ ಚಿನ್ನದ ಪೇಸ್ಟ್ ತುಂಬಿಕೊಂಡು ಅದನ್ನು ಒಳಉಡುಪಿನಲ್ಲಿ ಇರಿಸಿಕೊಂಡು ಕಳ್ಳಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.
ಇದೇ ತಿಂಗಳ 14 ನೇ ತಾರೀಖಿನಂದು ರಿಯಾದ್‌ನಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರಿಂದ 67 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನವನ್ನು ಹೈದರಾಬಾದ್ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. 24 ಕ್ಯಾರೆಟ್ ಶುದ್ಧತೆಯ 14 ಚಿನ್ನದ ಗಟ್ಟಿಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿತ್ತು. ವಶಕ್ಕೆ ಪಡೆದ ಚಿನ್ನದ ಗಟ್ಟಿಗಳ ಒಟ್ಟು ತೂಕ 1287.6 ಗ್ರಾಂ ಇದ್ದು, ಇದರ ಮೌಲ್ಯ ಸುಮಾರು 67,96,133 ರೂ. ಆಗಿತ್ತು.
ಇದನ್ನೂ ಓದಿ :ಪಾದರಕ್ಷೆ, ಒಳಉಡುಪಿನಲ್ಲಿದ್ದ ₹1.40 ಕೋಟಿ ಮೌಲ್ಯದ 3 ಕೆಜಿ ಚಿನ್ನ ವಶಕ್ಕೆ!- ವಿಡಿಯೋ