ಬೈಕ್ ಬೇರೆಡೆ ನಿಲ್ಲಿಸು ಎಂದಿದ್ದಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ.. ದೂರು ದಾಖಲು - ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿಜಯಪುರ: ಮನೆ ಎದುರು ನಿಲ್ಲಿಸಿದ್ದ ಬೈಕ್ ತೆಗೆಯುವ ವಿಚಾರವಾಗಿ ಜಗಳ ಶುರುವಾಗಿ ಹರಿತ ಆಯುಧದಿಂದ ವ್ಯಕ್ತಿ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಅಫಲಪುರ ಟಕ್ಕೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಹಲ್ಲೆಗೊಳಗಾದವರನ್ನು ಕಿರಣ ಗಜಕೋಶ ಎಂದು ಗುರುತಿಸಲಾಗಿದೆ. ಅವರ ಮೇಲೆ ಬಸಯ್ಯ ಹಿರೇಮಠ, ಗೌರಮ್ಮ ಹಿರೇಮಠ, ಸಿದ್ದರಾಮಯ್ಯ ಹಿರೇಮಠ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಾದ ವ್ಯಕ್ತಿ ಕಿರಣ ಪತ್ನಿ ಸುಜಾತ ಗಜಕೋಶ ಆರೋಪಿಸಿದ್ದಾರೆ.
ಮನೆ ಎದುರು ಕಾರು ನಿಲ್ಲಿಸಿದ್ದ ವೇಳೆ ಎದುರಿನ ಮನೆಯವರು ಬೈಕ್ ನಿಲ್ಲಿಸಿದ್ದರು. ಅದನ್ನು ತೆಗೆದು ಬೇರೆಡೆ ನಿಲ್ಲಿಸಿ ಎಂದಿದ್ದಕ್ಕೆ ಆರೋಪಿಗಳು ಕೊಡಲಿ, ಮಚ್ಚು ತೆಗೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಈ ಹಿಂದೆಯೂ ಅವರು ತಮ್ಮ ಮಾವನ ಮಗಳ ಮೇಲೆ ಹಲ್ಲೆ ನಡೆಸಿ ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಆದರೂ ಬುದ್ಧಿ ಕಲಿಯದೇ ಮತ್ತೆ ಈ ರೀತಿ ಕೃತ್ಯ ಎಸಗಿದ್ದಾರೆ ಎಂದು ಸುಜಾತ ಆರೋಪಿಸಿದ್ದಾರೆ.
ಹಲ್ಲೆ ನಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂಓದಿ:ರೌಡಿ ಶೀಟರ್ ಸಂತೋಷ್ ಮೃತ ದೇಹ ಮಾಗಡಿಯಲ್ಲಿ ಪತ್ತೆ.. ಪ್ರತಿಕಾರದ ಹತ್ಯೆ ಶಂಕೆ