ದೆಹಲಿ: ಪ್ರಗತಿ ಮೈದಾನದ ಬಳಿ ಹಳಿ ತಪ್ಪಿದ ಲೋಕಲ್ ರೈಲು- ವಿಡಿಯೋ
Published : Sep 3, 2023, 2:25 PM IST
ನವದೆಹಲಿ :ಹರಿಯಾಣದ ಪಲ್ವಾಲ್‌ನಿಂದ ನವದೆಹಲಿಗೆ ಆಗಮಿಸುತ್ತಿದ್ದ ಲೋಕಲ್ ಟ್ರೈನ್ ರಾಜಧಾನಿಯ ಪ್ರಗತಿ ಮೈದಾನದ ಬಳಿ ಇಂದು ಹಳಿ ತಪ್ಪಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ರೈಲಿನ ಬೋಗಿಗೆ ಹಾನಿಯಾಗಿದೆ. ರೈಲು ಹಳಿ ತಪ್ಪಲು ಕಾರಣವೇನು? ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಬೆಳಗ್ಗೆ 7:55ಕ್ಕೆ ಎಂದಿನಂತೆ ಪಲ್ವಾಲ್‌ನಿಂದ ನವದೆಹಲಿಗೆ ಈ ರೈಲು ಹೊರಟಿದೆ. ಬಲ್ಲಭಗಢ, ಫರಿದಾಬಾದ್, ತುಘಲಕಾಬಾದ್, ಓಖ್ಲಾ, ಹಜರತ್ ನಿಜಾಮುದ್ದೀನ್, ತಿಲಕ್ ಸೇತುವೆ, ಶಿವಾಜಿ ಸೇತುವೆ ಮೂಲಕ ನವದೆಹಲಿ ರೈಲು ನಿಲ್ದಾಣವನ್ನು ತಲುಪುತ್ತದೆ. ಬೆಳಗ್ಗೆ 9:47ರ ಸುಮಾರಿಗೆ ಪ್ರಗತಿ ಮೈದಾನದ ಬಳಿ ಆಗಮಿಸಿದ್ದಾಗ ರೈಲು ಹಳಿ ತಪ್ಪಿದ್ದು, ರಜಾ ದಿನವಾದ್ದರಿಂದ ಹೆಚ್ಚಿನ ಜನಸಂದಣಿ ಇರಲಿಲ್ಲ. ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ ರೈಲಿನಲ್ಲಿದ್ದ ಪ್ರಯಾಣಿಕರು ಕೆಲ ಕಾಲ ಭಯ ಭೀತರಾಗಿದ್ದರು. ಈ ಕುರಿತು ಮಾಹಿತಿ ತಿಳಿದ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ರೈಲನ್ನು ಮಾರ್ಗದಿಂದ ತೆಗೆದು ಹಳಿ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ.
ರೈಲು ಹಳಿತಪ್ಪಿರುವುದು ಹಜರತ್ ನಿಜಾಮುದ್ದೀನ್‌ನಿಂದ ನವದೆಹಲಿಗೆ ಸಂಚರಿಸುವ ಇತರೆ ರೈಲುಗಳ ಕಾರ್ಯಾಚರಣೆ ಮೇಲೂ ಪರಿಣಾಮ ಬೀರಿದೆ. ರೈಲ್ವೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಬೇರೊಂದು ಮಾರ್ಗದ ಮೂಲಕ ಇತರೆ ರೈಲುಗಳನ್ನು ನವದೆಹಲಿಗೆ ಕಳುಹಿಸಲಾಗುತ್ತಿದೆ. ಆದರೆ, ಇದರಿಂದ ಪ್ರಯಾಣಿಕರಿಗೆ ಸ್ವಲ್ಪ ವಿಳಂಬವಾಗಬಹುದು ಎಂದು ತಿಳಿಸಿದೆ.
ಇದನ್ನೂ ಓದಿ :Balasore train tragedy: ಒಡಿಶಾ ತ್ರಿವಳಿ ರೈಲು ದುರಂತ.. ರೈಲ್ವೆ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್