ಗುವಾಹಟಿಯಿಂದ ಮಣಿಪುರ ತಲುಪಿದ ಮೊದಲ ಸರಕು ರೈಲು.. - North East Frontier Railway
ಗುವಾಹಟಿ:ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಆಹಾರ ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳ ಬಿಕ್ಕಟ್ಟಿನ ಮಧ್ಯೆ ಗುವಾಹಟಿಯಿಂದ ಸರಕು ರೈಲು ಸೋಮವಾರ ಮಣಿಪುರ ರಾಜ್ಯದ ತಮೆಂಗ್‌ಲಾಂಗ್ ಜಿಲ್ಲೆಯ ಖೊಂಗ್‌ಸಾಂಗ್ ರೈಲು ನಿಲ್ದಾಣವನ್ನು ತಲುಪಿದೆ.
ರೈಲ್ವೆ ಪ್ರಾಧಿಕಾರವು ಅಸ್ಸೋಂನ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಭಾನುವಾರ ಮಣಿಪುರಕ್ಕೆ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳನ್ನು ಸಾಗಿಸುವ ಮೊದಲ ಸರಕು ರೈಲಿಗೆ ಹಸಿರು ನಿಶಾನೆ ತೋರಲಾಯಿತು ಎಂದು ಈಶಾನ್ಯ ಗಡಿ ರೈಲ್ವೆ (ಎನ್‌ಎಫ್‌ಆರ್) ಮೂಲಗಳು ತಿಳಿಸಿವೆ. ಖೋಂಗ್‌ಸಾಂಗ್ ರೈಲು ನಿಲ್ದಾಣಕ್ಕೆ ರೈಲು ಆಗಮಿಸಿದಾಗ, ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ಇತರ ಸಚಿವರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್: "ಮೊದಲ ಬಾರಿಗೆ ಈಶಾನ್ಯ ಗಡಿ ರೈಲ್ವೆಯ ಸರಕು ರೈಲು ಅಗತ್ಯ ವಸ್ತುಗಳೊಂದಿಗೆ (ಆಲೂಗಡ್ಡೆ, ಅಕ್ಕಿ, ಸಕ್ಕರೆ, ಈರುಳ್ಳಿ ಮತ್ತು ಇತರ ಆಹಾರ ಉತ್ಪನ್ನಗಳು) ಮಣಿಪುರದ ಖೋಂಗ್ಸಾಂಗ್ ನಿಲ್ದಾಣವನ್ನು ತಲುಪಿದೆ" ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ.
ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಟ್ವೀಟ್:"ಇಂದು ಖೊಂಗ್‌ಸಾಂಗ್ ರೈಲು ನಿಲ್ದಾಣದಲ್ಲಿ ಸರಕು ರೈಲು ಉದ್ಘಾಟಿಸಿರುವುದು ಸಂತೋಷ ತಂದಿದೆ. ಈ ಬೆಳವಣಿಗೆಯು ಮಣಿಪುರದ ಜನರಿಗೆ ಸಾಕಷ್ಟು ಅವಕಾಶಗಳನ್ನು ತೆರೆಯುತ್ತದೆ. ಸರಕುಗಳು ಮತ್ತು ಅಗತ್ಯ ಸರಕುಗಳ ತ್ವರಿತ ಸಾಗಣೆಗೆ ಭರವಸೆ ನೀಡುತ್ತದೆ. ತಡೆರಹಿತ ಲಾಜಿಸ್ಟಿಕ್ಸ್ ನಿಸ್ಸಂದೇಹವಾಗಿ ಕೈಗಾರಿಕಾ ಬೆಳವಣಿಗೆ ಉತ್ತೇಜಿಸುತ್ತದೆ. ವ್ಯಾಪಾರವನ್ನು ಹೆಚ್ಚಿಸುತ್ತದೆ. ಅಂತಿಮವಾಗಿ ಜೀವನದ ಒಟ್ಟಾರೆ ಗುಣಮಟ್ಟ ಹೆಚ್ಚಿಸುತ್ತದೆ. ಈ ಮಹತ್ವದ ಉಪಕ್ರಮದ ಮೂಲಕ ರಾಜ್ಯದ ಆರ್ಥಿಕ ಭವಿಷ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರಿಗೆ ಕೃತಜ್ಞತೆಗಳು" ಎಂದು ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:G -20 ಶೃಂಗಸಭೆ ನಡೆಯಲಿರುವ ಸ್ಥಳ ಹೇಗಿದೆ ಗೊತ್ತಾ? ಹಾಗಾದರೆ ಇಲ್ಲಿದೆ ನೋಡಿ ವಿಡಿಯೋ..!