ತುಮಕೂರಲ್ಲಿ ಭೀಕರ ಅಪಘಾತ: ನವ ವಿವಾಹಿತ ದಂಪತಿ ಸಾವು - ಲಾರಿಗೆ ಡಿಕ್ಕಿಯಾಗಿ ನವದಂಪತಿ ಮೃತ
ತುಮಕೂರು: ಭೀಕರ ಅಪಘಾತ ಸಂಭವಿಸಿದ್ದು ನವ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಚಿಕ್ಕನಾಯಕನಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ನಡೆದಿದೆ. ರಘು(35), ಅನುಷಾ (28) ಸ್ಥಳದಲ್ಲೇ ಮೃತಪಟ್ಟ ದಂಪತಿ. ಇಂದು (ಶನಿವಾರ) ಮಧ್ಯಾಹ್ನ 12ಗಂಟೆ ವೇಳೆ ಈ ದುರಂತ ನಡೆದಿದೆ. ದಂಪತಿ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಗಳನಹಳ್ಳಿಯಿಂದ ಹ್ಯೂಂಡೈ ಕ್ರೆಟಾ ಕಾರಿನಲ್ಲಿ ಬಳ್ಳಾರಿಗೆ ತೆರಳುತ್ತಿದ್ದರು. ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿದ ದಂಪತಿಯ ಕಾರು, ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ದಂಪತಿ ಕೇವಲ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಅಷ್ಟರಲ್ಲೇ ಮೃತಪಟ್ಟಿದ್ದರು. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಹಾಸನ ಜಿಲ್ಲೆ ಅರಸಿಕೆರೆ ಮೂಲದ ರಘು ಚಿಕ್ಕನಾಯಕನಹಳ್ಳಿ ತಾಲೂಕಿನ ತಿಗಳನಹಳ್ಳಿ ಅನು ಅವರನ್ನು ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದ ದಂಪತಿ, ಸಂಬಂಧಿಕರೊಬ್ಬರ ಮದುವೆಗೆಂದು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಲಾರಿಗೆ ಡಿಕ್ಕಿಯಾಗಿ ನವ ದಂಪತಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ನೇರ ಮದುವೆ ದಿಬ್ಬಣಕ್ಕೆ ನುಗ್ಗಿದ ಕಾರು: ಓರ್ವ ಸ್ಥಳದಲ್ಲೇ ಸಾವು, 31 ಜನರಿಗೆ ಗಂಭೀರ ಗಾಯ