ನೆಲಮಂಗಲ: ಪಾನಿಪೂರಿ ತಿಂದು ಹಣ ಕೊಡದೆ ಅಂಗಡಿ ಪುಡಿಗಟ್ಟಿದ ಯುವಕ ಸೆರೆ - ಇನ್ಸ್ಸ್ಪೆಕ್ಟರ್ ಎಸ್ ಡಿ ಶಶಿಧರ್
Published : Aug 28, 2023, 10:15 PM IST
ನೆಲಮಂಗಲ :ಪಾನಿಪೂರಿ ತಿಂದು ಹಣ ಕೇಳಿದ್ದಕ್ಕೆ ಯುವಕನೊಬ್ಬ ಪುಡಿ ರೌಡಿಯಂತೆ ವರ್ತಿಸಿ ಪಾನಿಪೂರಿ ಅಂಗಡಿಯನ್ನು ಪುಡಿಗಟ್ಟಿ, ಸಾರ್ವಜನಿಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪುಂಡಾಟಿಕೆ ಮೆರೆದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ.
ಎಂ.ಜಿ.ರಸ್ತೆಯಿಂದ ವಾಜರಹಳ್ಳಿಗೆ ಹೋಗುವ ರಸ್ತೆ ಬದಿಯಲ್ಲಿ ಪುನೀತ್ ಎಂಬವರು ಪಾನಿಪೂರಿ ಅಂಗಡಿ ಇಟ್ಟುಕೊಂಡಿದ್ದಾರೆ. ವಾಜರಹಳ್ಳಿಯ ರಂಜಿತ್ ಎಂಬ ಯುವಕ ಅಂಗಡಿಗೆ ಬಂದು ಪಾನಿಪೂರಿ ತಿಂದಿದ್ದಾನೆ. ಬಳಿಕ ಪುನೀತ್ ಹಣ ಕೇಳಿದ್ದು, ಯುವಕ ಆಕ್ರೋಶಗೊಂಡಿದ್ದಾನೆ.
ಅಂಗಡಿ ಧ್ವಂಸ ಮಾಡುವ ವೇಳೆ ಸಾರ್ವಜನಿಕರು ತಡೆಯಲು ಬಂದಾಗ ಅವರನ್ನೂ ನಿಂದಿಸಿ, ದರ್ಪ ತೋರಿಸಿದ್ದಾನೆ. ವಿಷಯ ತಿಳಿದ ಕೂಡಲೇ ನೆಲಮಂಗಲ ಟೌನ್ ಇನ್ಸ್ಪೆಕ್ಟರ್ ಎಸ್.ಡಿ.ಶಶಿಧರ್ ಹಾಗೂ ಸಬ್ ಇನ್ಸ್ಪೆಕ್ಟರ್ ಜಯಂತಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಂಜಿತ್ ಈ ಹಿಂದೆ ಅಪರಾಧ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಾನಿಪೂರಿ ತಿಂದು ಹಣ ನೀಡದೆ ದೌರ್ಜನ್ಯ, ದರ್ಪ ಮೆರೆದ ಆರೋಪಿ ಯುವಕನನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.