ಕುಂದಾನಗರಿಯಲ್ಲಿ ದಾಂಡಿಯಾ ಸಂಭ್ರಮ: ಕುಣಿದು ಕುಪ್ಪಳಿಸಿದ ಯುವಕ - ಯುವತಿಯರು - ಬೆಳಗಾವಿಯಲ್ಲಿ ನವರಾತ್ರಿ ಹಬ್ಬ
Published : Oct 20, 2023, 2:06 PM IST
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ನವರಾತ್ರಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ದೇವಿಯ ಆರಾಧನೆ ಜೋರಾಗಿದೆ. ಭಕ್ತಿ-ಭಾವದ ಜೊತೆಗೆ ದಾಂಡಿಯಾ ನೃತ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಹೌದು, ಪಕ್ಕದ ಮಹಾರಾಷ್ಟ್ರ ರಾಜ್ಯದ ಮುಂಬೈ, ಪುಣೆ ನಗರಗಳನ್ನು ನೆನಪಿಸುವಂತೆ ಬೆಳಗಾವಿಯಲ್ಲಿ ದಾಂಡಿಯಾ ಆಯೋಜಿಸಲಾಗಿದೆ. ಬೆಳಗ್ಗೆ ದುರ್ಗಾಮಾತಾ ದೌಡ್ನಲ್ಲಿ ಹೆಜ್ಜೆ ಹಾಕುವ ಜನ, ಸಾಯಂಕಾಲ ದಾಂಡಿಯಾದಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಬೆಳಗಾವಿಯ ಪ್ರತಿ ಬಡಾವಣೆ, ಅಪಾರ್ಟ್ಮೆಂಟ್, ಮೈದಾನಗಳು, ಕಲ್ಯಾಣಮಂಟಪಗಳು ಹೀಗೆ ಎಲ್ಲಿ ನೋಡಿದರೂ ದಾಂಡಿಯಾ ನೃತ್ಯ ಆಯೋಜನೆ ಮಾಡಿದ್ದಾರೆ. ಚಿಕ್ಕಮಕ್ಕಳು, ಕಾಲೇಜು ಯುವಕ- ಯುವತಿಯರಿಂದ ಹಿಡಿದು ವಯಸ್ಸಾದವರು ದಾಂಡಿಯಾ ಉತ್ಸವದಲ್ಲಿ ಮಿಂದೇಳುತ್ತಿದ್ದಾರೆ.
ರಾಣಿ ಚನ್ನಮ್ಮ ನಗರದ ಮೈದಾನದಲ್ಲಿ ಶಾಸಕ ಅಭಯ ಪಾಟೀಲ ಆಯೋಜಿಸಿದ್ದ ದಾಂಡಿಯಾ ನೃತ್ಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಯುವಕ-ಯುವತಿಯರು, ಮಹಿಳೆಯರು, ಪುಟಾಣಿಗಳ ದಂಡೇ ಹರಿದು ಬಂದಿತ್ತು. ಕನ್ನಡ, ಮರಾಠಿ, ಗುಜರಾತಿ, ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆ ತೊಟ್ಟು ಆಯಾ ಭಾಷೆಯ ಸಾಂಪ್ರದಾಯಿಕ ಹಾಡುಗಳಿಗೆ ಕೋಲಾಟವಾಡುತ್ತಾ, ಯುವಕ ಯುವತಿಯರು ಹೆಜ್ಜೆ ಹಾಕುವುದನ್ನು ನೋಡುವುದೇ ಕಣ್ಣಿಗೆ ಹಬ್ಬದಂತಿತ್ತು.
ಈ ವೇಳೆ ಭಾಗ್ಯ ನಗರದಿಂದ ಆಗಮಿಸಿದ್ದ ವಿದ್ಯಾ ಹಿರೋಬಾಳ ಮತ್ತು ಶಕುಂತಲಾ ಖೋತ ಅವರು ಮಾತನಾಡಿ, ದಾಂಡಿಯಾದಲ್ಲಿ ನಮಗೆ ಹೇಗೆ ಬರುತ್ತೋ ಹಾಗೆ ಕುಣಿದು, ಎಂಜಾಯ್ ಮಾಡುತ್ತಿದ್ದೇವೆ. ಬಹಳ ಖುಷಿಯಾಗುತ್ತಿದೆ. ನವರಾತ್ರಿಗೆ ದಾಂಡಿಯಾ ಇರಲೇಬೇಕು ಎಂದು ಹರ್ಷ ವ್ಯಕ್ತಪಡಿಸಿದರು.
ಯುವತಿ ಶೃದ್ಧಾ ಬಾನಾಕೆ ಮಾತನಾಡಿ, ನಮ್ಮ ಸ್ನೇಹಿತೆಯರ ಜೊತೆಗೆ ಬಂದಿದ್ದೇನೆ. ಪ್ರತಿ ವರ್ಷವೂ ಬರುತ್ತೇನೆ. ದಾಂಡಿಯಾ ಹಾಡು, ಮಿಕ್ಸ್ ರಿಮಿಕ್ಸ್ ಹಾಡುಗಳಿಗೆ ಡ್ಯಾನ್ಸ್ ಮಾಡಿ ಸಖತ್ ಎಂಜಾಯ್ ಮಾಡುತ್ತೇವೆ ಎಂದರು.
ಇದನ್ನೂ ಓದಿ :ಬಮುಮುಖ ಪ್ರತಿಭೆ ಸಿಮ್ರನ್ ಅಹುಜಾ ನೃತ್ಯಕ್ಕೆ ಮನಸೋತ ಪ್ರೇಕ್ಷಕರು - ದಾಂಡಿಯಾ ವಿಡಿಯೋ ನೋಡಿ