ಧಾರವಾಡ: ಶಾಲಾ ಮಕ್ಕಳಿಂದ ನಾಗರ ಪಂಚಮಿ ಆಚರಣೆ.. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು - ಈಟಿವಿ ಭಾರತ ಕನ್ನಡ
ಧಾರವಾಡ:ರಾಜ್ಯದಲ್ಲಿ ನಾಗರ ಪಂಚಮಿ ಹಬ್ಬ ಜೋರಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರು ನಾಗರ ಪಂಚಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಧಾರವಾಡ ಜಿಲ್ಲೆಯಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇಲ್ಲಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ ನಾಗರ ಪಂಚಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.
ಧಾರವಾಡ ಮೃತ್ಯುಂಜಯ ಬಡಾವಣೆಯಲ್ಲಿರುವ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ತಮ್ಮ ಶಾಲಾ ಆವರಣದಲ್ಲಿ ಹುತ್ತಪ್ಪ ಮತ್ತು ನಾಗದೇವರ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದ್ದಾರೆ. ಸದಾ ಯುನಿಫಾರ್ಮ್ ಧರಿಸುತ್ತಿದ್ದ ವಿದ್ಯಾರ್ಥಿಗಳು ಇಂದು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಶಿಕ್ಷಕರನ್ನು ಜೋಕಾಲಿಯಲ್ಲಿ ಕೂರಿಸಿದ ಮಕ್ಕಳು ತೂಗಿ ಖುಷಿಪಟ್ಟಿದ್ದಾರೆ. ಬಳೆ ತೊಡುವ ಸಂಪ್ರದಾಯ ಸೇರಿದಂತೆ ಗ್ರಾಮೀಣ ಸೊಗಡಿನ ಅನಾವರಣ ಮಾಡಿ ಶಿಕ್ಷಕರು ಮತ್ತು ಮಕ್ಕಳು ಸೇರಿ ಹಬ್ಬ ಆಚರಣೆ ಮಾಡಿದ್ದಾರೆ.
ನಾಗರ ಪಂಚಮಿಯನ್ನು ಕರಾವಳಿಯಲ್ಲಿಯೂ ಕೂಡ ಜನರು ವಿಶೇಷವಾಗಿ ಆಚರಿಸುತ್ತಾರೆ. ನಾಗದೇವರನ್ನು ಆರಾಧಿಸುವ ಈ ಹಬ್ಬದ ದಿನ ಹಾಲು, ಎಳನೀರು, ಹೂವು, ಸಿಂಗಾರದೊಂದಿಗೆ ನಾಗಬನಗಳಲ್ಲಿ ಭಕ್ತರ ದಂಡು ಕಾಣಿಸುತ್ತಿದೆ.
ಇದನ್ನೂ ಓದಿ:ದ.ಕ ಜಿಲ್ಲೆಯಲ್ಲಿ ನಾಗರ ಪಂಚಮಿ ಸಂಭ್ರಮ: ನಾಗದೇವರಿಗೆ ಹಾಲು, ಎಳನೀರಿನ ಅಭಿಷೇಕ