ಯಾದಗಿರಿ: ಕೊಂಡಮ್ಮ ದೇವಿ ಬೆಟ್ಟದಲ್ಲಿ ಚೇಳು ಹಿಡಿದು ನಾಗರಪಂಚಮಿ ಆಚರಣೆ
Published : Aug 21, 2023, 9:45 PM IST
ಯಾದಗಿರಿ :ರಾಜ್ಯಾದ್ಯಂತ ಇಂದು ನಾಗರ ಪಂಚಮಿ ಹಬ್ಬ ಆಚರಿಸಲಾಗಿದೆ. ಜನರು ದೇವಸ್ಥಾನಕ್ಕೆ ಭೇಟಿ ನೀಡಿ ನಾಗರ ಕಲ್ಲಿಗೆ ಹಾಲೆರೆದು ಪಂಚಮಿ ಆಚರಿಸಿದರು. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದ ಕೊಂಡಮ್ಮ ದೇವಿಯ ಬೆಟ್ಟದಲ್ಲಿ ಭಕ್ತರು ಚೇಳು ಹಿಡಿಯುವ ಮೂಲಕ ವಿಶೇಷವಾಗಿ ಪಂಚಮಿ ಹಬ್ಬಾಚರಿಸಿದರು.
ಬೆಟ್ಟದ ಮೇಲಿರುವ ಕೊಂಡಮ್ಮ ದೇವಿಯ ದರ್ಶನ ಪಡೆಯುವ ಭಕ್ತರು, ಇಲ್ಲಿನ ಬಂಡೆಗಳ ಅಡಿಯಲ್ಲಿರುವ ಚೇಳುಗಳನ್ನು ಹಿಡಿಯುತ್ತಾರೆ. ನಾಗರಪಂಚಮಿ ದಿನ ಬೆಟ್ಟದ ಮೇಲಿರುವ ಚೇಳುಗಳು ಕಚ್ಚುವುದಿಲ್ಲ ಎಂಬುದು ಇಲ್ಲಿನ ಜನರ ನಂಬಿಕೆ. ಬೀದರ್, ರಾಯಚೂರು, ಕಲಬುರಗಿ ಸೇರಿದಂತೆ ಆಂಧ್ರಪ್ರದೇಶದ ಕೊಡಂಗಲ್, ತಾಂಡೂರ ಮುಂತಾದ ಕಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಕೊಂಡಮ್ಮ ದೇವಿ ಪಕ್ಕದಲ್ಲಿರುವ ಚೇಳು ಮೂರ್ತಿಗೆ ಹಾಲೆರೆಯುವುದೇ ವಿಶೇಷ. ಹಬ್ಬದಂದು ಇಲ್ಲಿನ ಕಲ್ಲುಗಳ ಎಡೆಯಲ್ಲಿ ಚೇಳುಗಳು ಕಾಣಸಿಗುತ್ತವೆ. ಈ ಚೇಳುಗಳನ್ನು ಭಕ್ತರು ಮೈಮೇಲೆ ಹರಿಬಿಡುತ್ತಾರೆ.
ಭಕ್ತೆಯೋರ್ವರು ಮಾತನಾಡಿ, ಪ್ರತಿ ವರ್ಷ ನಾವು ಇಲ್ಲಿನ ಕೊಂಡಮ್ಮ ದೇವಿಗೆ ದರುಶನಕ್ಕೆ ಆಗಮಿಸುತ್ತೇವೆ. ಬೆಟ್ಟದ ಕಲ್ಲಿನ ಕೆಳಗಿರುವ ಚೇಳು ಹಿಡಿದು ಮೈಮೇಲೆ ಹಾಕಿಕೊಂಡು ಖುಷಿಪಡುತ್ತೇವೆ. ಇಂದು ಈ ಚೇಳುಗಳು ಯಾರಿಗೂ ಕಚ್ಚುವುದಿಲ್ಲ ಎಂದರು.
ಇದನ್ನೂ ಓದಿ :ಪ್ರತಿ ವರ್ಷ ಮನೆಯಲ್ಲಿ ಜೀವಂತ ನಾಗರನಿಗೆ ಪೂಜೆ! ಶಿರಸಿ ಉರಗ ಪ್ರೇಮಿಯಿಂದ ವಿಶಿಷ್ಟ ಜನಜಾಗೃತಿ-ವಿಡಿಯೋ